ಗಾನ ಕೋಗಿಲೆ ಲತಾ ಮಂಗೇಶ್ಕರ್ ವಿಧಿವಶ

ಮುಂಬೈ: ಗಾನ ಕೋಗಿಲೆ, ಭಾರತ ರತ್ನ ಲತಾ ಮಂಗೇಶ್ಕರ್ (92) ಅವರು  ವಿಧಿವಶರಾಗಿದ್ದಾರೆ.

ತಮ್ಮ ಕಂಠಸಿರಿಯಿಂದ ಭಾರತೀಯ ಚಿತ್ರರಂಗದಲ್ಲಿ 36 ಭಾಷೆಗಳಲ್ಲಿ ಹಾಡಿರುವ ಲತಾಮಂಗೇಶ್ಕರ್ ತಮ್ಮ 13ನೆ ವಯಸ್ಸಿನಲ್ಲೇ ಗಾಯನ ಆರಂಭಿಸಿದ್ದರು.

ಅವರು ಸುಮಾರು ಏಳು ದಶಕಗಳ ಕಾಲ ಭಾರತದ ಮಧುರ ಕಂಠದ ಗಾಯಕಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು.

1929ರ ಸೆಪ್ಟೆಂಬರ್ 28ರಂದು ಮಧ್ಯ ಪ್ರದೇಶದ ಇಂದೋರ್‍ನಲ್ಲಿ ಸಂಗೀತಗಾರ ದೀನನಾಥ್ ಮಂಗೇಶ್ಕರ್ ಮತ್ತು ಸೇವಂತಿ ಮಂಗೇಶ್ಕರ್ ಅವರ ಪುತ್ರಿಯಾಗಿ ಜನಿಸಿದ ಲತಾ ಅವರ ಮೊದಲ ಹೆಸರು ಹೇಮಾ‌ ಮಂಗೇಶ್ಕರ್.

ಬಾಲ್ಯದಲ್ಲಿದ್ದಾಗ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದ ಲತಾ ಅವರಿಗೆ ಅವರ ತಂದೆಯೇ ಮೊದಲ ಗುರು.

ಲತಾ‌ ಅವರಿಗೆ ಕೊರೊನ ಪಾಸಿಟೀವ್ ಇದ್ದುದರಿಂದ ಜನವರಿ 8ರಂದು ಸಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಮುಂಬೈನ ಪ್ರತಿಷ್ಠಿತ ಬ್ರಿಡ್ಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿದ್ದರು.

ಎರಡು ದಿನಗಳ ಹಿಂದೆ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದವು.

ಆದರೆ ಶನಿವಾರ ಮತ್ತೆ‌ ಅವರ ಆರೋಗ್ಯ ಬಿಗಡಾಯಿಸಿತು.ಭಾನುವಾರ ಬೆಳಿಗ್ಗೆ ಲತಾ ಕೊನೆಯುಸಿರೆಳೆದಿದ್ದಾರೆ.

ಅವರು ಮೊದಲು 1948ರಲ್ಲಿ ಮಜಬೂರ್ ಎಂಬ ಚಿತ್ರದ ದಿಲ್‍ಮೆರಾ ಥೋಡಾ ಎಂಬ ಚಿತ್ರಗೀತೆಯಿಂದ ಪಾದಾರ್ಪಣೆ ಮಾಡಿದರೂ 1949ರಲ್ಲಿ ಹಾಡಿದ ಆಯೆಗಾ ಆನೆವಾಲಾ ಎಂಬ ಮಹಲ್ ಚಿತ್ರದಿಂದ ಜನಪ್ರಿಯತೆ ಪಡೆದರು.

ಸ್ವರ ಸಾಮ್ರಾಜ್ಞಿ ಲತಾ ಅವರು, ಭಾರತೀಯ ಚಿತ್ರರಂಗದಲ್ಲಿ  ಅಪ್ರತಿಮ ಗಾಯಕಿಯಾಗಿ ಬೆಳೆದರು.

ಅವರ ಅದೆಷ್ಟೋ ಹಾಡುಗಳು ಜನಪ್ರಿಯವಾಗಿ ಚಿತ್ರರಂಗದ ಅಮರಗೀತೆಗಳಾಗಿ ಉಳಿದಿವೆ.

36 ಭಾಷೆಗಳಲ್ಲಿ ಒಟ್ಟು 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಲತಾ ಅವರು ಹಿಂದಿ ಭಾಷೆಯೊಂದರಲ್ಲೇ ಅತಿ ಹೆಚ್ಚು ಹಾಡು ಹಾಡಿದ್ದಾರೆ.

ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ 1989ರಲ್ಲಿ, ಪದ್ಮವಿಭೂಷಣ ಪ್ರಶಸ್ತಿ 1999ರಲ್ಲಿ ಹಾಗೂ 2001ರಲ್ಲಿ ಭಾರತರತ್ನ ಪ್ರಶಸ್ತಿಗೆ ಅವರು  ಭಾಜನರಾದರು.

ಇದಲ್ಲದೆ, ನ್ಯಾಷನಲ್ ಫಿಲ್ಮ್‍ ಫೇರ್ ಅವಾರ್ಡ್, ಜೀವಮಾನ ಸಾಧನೆ ಪುರಸ್ಕಾರದಂತಹ ಹತ್ತು-ಹಲವು ಪ್ರಶಸ್ತಿ ಪುರಸ್ಕಾರಗಳು  ಅವರಿಗೆ ಲಭ್ಯವಾಗಿವೆ

ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಲತಾ ದೀದಿ ಅವರ ನಿರ್ಗಮನದಿಂದ ಎಲ್ಲ ಭಾರತೀಯರೊಂದಿಗೆ ನನಗೂ ತೀವ್ರ ದುಃಖವಾಗಿದೆ ಎಂದಿದ್ದಾರೆ.

ಲತಾ ಅವರು ಯಾರೂ ತುಂಬಲಾಗದ ಶೂನ್ಯವನ್ನು ಬಿಟ್ಟು ಹೋಗಿದ್ದಾರೆ. ಸಾಟಿಯಿಲ್ಲದ ಮಧುರ ಧ್ವನಿಯಿಂದ ಕೇಳುಗರನ್ನು ಮಂತ್ರಮುಗ್ಧಗೊಳಿಸುತ್ತಿದ್ದ  ಅವರು ಭಾರತೀಯ ಸಂಸ್ಕೃತಿಯ ಹಿರಿಮೆ.

ಮುಂದಿನ ಪೀಳಿಗೆಯ ಜನರು ಅವರನ್ನು ಸ್ಮರಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಾಹುಲ್ ಗಾಂಧಿ,ಅಮಿತ್ ಷಾ, ಕೇಂದ್ರ ಸಚಿವರಾದ ರಾಜನಾಥ್‍ಸಿಂಗ್,  ನಿರ್ಮಲಾ ಸೀತಾರಾಮನ್, ನಿತಿನ್ ಗಡ್ಕರಿ ಮತ್ತಿತರರು ಲತಾ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ.

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಹಲವಾರು ಸಚಿವರು ಲತಾ ಅವರ ನಿರ್ಗಮನಕ್ಕೆ ಸಂತಾಪ ಸೂಚಿಸಿದ್ದಾರೆ.

ಹಾಲಿವುಡ್, ಬಾಲಿವುಡ್, ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಬಂಗಾಳಿ ಚಿತ್ರರಂಗದ  ಗಣ್ಯರು ಲತಾ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಬಹಳಷ್ಟು ಗಾಯಕರು ತಮ್ಮ ಗಾಯನದ ಮೂಲಕ ಲತಾ ಮಂಗೇಶ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.