ಬೆಂಗಳೂರು: ಸಮಾಜವನ್ನು ವಿಚಲಿತಗೊಳಿಸುವ ಪ್ರಕರಣಗಳು ನಡೆದಾಗ ಮಾತ್ರ ನಾನು ತಲೆಕೆಡಿಸಿಕೊಳ್ಳುತ್ತೇನೆ, ಉಳಿದಂತೆ ಕೂಲ್ ಆಗಿ ಇರುತ್ತೇನೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಭಾನುವಾರ ಮಾತ್ರವಲ್ಲದೆ ಎಲ್ಲಾ ದಿನಗಳಲ್ಲೂ ತಾಳ್ಮೆ ಮತ್ತು ಖುಷಿಯಿಂದ ಇರುತ್ತೇನೆ. ಸಮಾಜ ಡಿಸ್ಟರ್ಬ್ ಆಗುವ ಘಟನೆಗಳು ನಡೆದಾಗ ಮಾತ್ರ ತಾಳ್ಮೆ ಕಳೆದುಕೊಳ್ಳುವುದಾಗಿ ತಿಳಿಸಿದರು.
ಕಾಂಗ್ರೆಸ್‍ನ ಡಿಜಿಟಲ್ ಸದಸ್ಯತ್ವ ನೋಂದಣಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೆ.ರಾಜು ಅವರು ಬೆಂಗಳೂರಿಗೆ ಆಗಮಿಸಿದ್ದರು. ನಿನ್ನೆ ನಮ್ಮ ಮನೆಗೂ ಭೇಟಿ ನೀಡಿದ್ದರು. ಇದೊಂದು ಸೌಜನ್ಯದ ಭೇಟಿ, ಹೈಕಮಾಂಡ್ ತಮಗೆ ಯಾವ ಸಂದೇಶವನ್ನು ಕಳುಹಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಿದ್ದು ಉತ್ತರಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ನನ್ನ ಸ್ನೇಹಿತ, ಮೊದಲಿನಿಂದಲೂ ಅವರನ್ನು ನಾನು ನೋಡಿದ್ದೇನೆ. ನನ್ನ ಪ್ರಕಾರ ಅವರು ಕಾಂಗ್ರೆಸ್ ತೊರೆಯುವುದಿಲ್ಲ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನ ಸಿಕ್ಕಿಲ್ಲ ಎಂದು ಸಿಟ್ಟಿನಲ್ಲಿದ್ದಾರೆ. ಕೋಪ ತಣ್ಣಗಾದ ಮೇಲೆ ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.
ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಸಿ.ಎಂ.ಇಬ್ರಾಹಿಂ ಅವರೊಂದಿಗೆ ಮಾತುಕತೆ ನಡೆಸಿ ಮನವೋಲಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‍ನಲ್ಲಿ ನಾನು ಖುಷಿಯಾಗಿಲ್ಲ, ವಿಚಲಿತನಾಗಿದ್ದೇನೆ ಎಂದು ಸಿ.ಎಂ.ಇಬ್ರಾಹಿಂ ಹೇಳಿರುವುದು ಸರಿಯಲ್ಲ, ಕಾಮಾಲೆ ಕಣ್ಣಿಗೆ ಕಾಣುವುದೇಲ್ಲಾ ಹಳದಿಯಂತೆ ಅವರಿಗೆ ನಾನು ಹಾಗೆ ಕಂಡಿರಬಹುದು ಎಂದರು.
ಇಬ್ರಾಹಿಂ ವಿರೇಂದ್ರ ಪಾಟೀಲರ ಜೊತೆ ಕಾಂಗ್ರೆಸ್‍ಗೆ ಸೇರಿದ್ದರು. ಆಗ ನಾನು ಅವರೊಂದಿಗೆ ಇರಲಿಲ್ಲ, ಕಾಂಗ್ರೆಸ್‍ನಲ್ಲೂ ಇರಲಿಲ್ಲ. ಹಾಗಾಗಿ ಆ ವೇಳೆ ಅವರಿಗೆ ಏನು ಅನ್ಯಾಯವಾಯಿತು ಎಂದು ನನಗೆ ತಿಳಿದಿಲ್ಲ ಎಂದು ಸಿದ್ದು ಹೇಳಿದರು.
ಕಾಲಾನಂತರ ಜನತಾ ದಳಕ್ಕೆ ಬಂದರು. ನಾನು ಜೆಡಿಎಸ್ ತೊರೆದು ಬಂದಾಗ ನನ್ನೊಂದಿಗೆ ಕಾಂಗ್ರೆಸ್‍ಗೆ ಬಂದರು ಎಂದು ತಿಳಿಸಿದರು.
ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯ ಅವರಿಗೆ ನಾನೇ ಟಿಕೆಟ್ ಕೊಡಿಸಿದ್ದೇನೆ ಎಂದು ಇಬ್ರಾಹಿಂ ಹೇಳಲು ಸಾಧ್ಯವಿಲ್ಲ. ಎಲ್ಲರಿಗೂ ಅವರೇ ಟಿಕೆಟ್ ಕೊಡಿಸಲು ಹೇಗೆ ಸಾಧ್ಯ ಎಂದು ಗರಂ ಆದರು.
1977ರಲ್ಲಿ ಇಬ್ರಾಹಿಂ ಟೌನ್ ಹಾಲ್‍ನಲ್ಲಿ ಭಾಷಣ ಮಾಡಲು ಬಂದಿದ್ದರು. ನಾನು ಆ ಕಾರ್ಯಕ್ರಮದಲ್ಲಿ ಕುಳಿತು ಭಾಷಣ ಕೇಳಿದ್ದೆ. ಈ ವಿಷಯವನ್ನು ನಾನು ಅವರ ಬಳಿ ಹಂಚಿಕೊಂಡಿದ್ದೆ. ಅದನ್ನೇ ತಿರುಚಿ ನನ್ನ ಭಾಷಣ ಕೇಳಲು ಸಿದ್ದರಾಮಯ್ಯ ಸ್ಕೂಟರ್‍ನಲ್ಲಿ ಬರುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಆಗ ನಾನು ವಿದ್ಯಾರ್ಥಿ, ನನ್ನ ಬಳಿ ಸ್ಕೂಟರು ಹೋಗ್ಲಿ ಸೈಕಲ್ ಕೂಡಾ ಇರಲಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

