ಮಹಿಳೆಯರ ಆತ್ಮರಕ್ಷಣೆಗೆ ವಿಶೇಷ ತರಬೇತಿ ನೀಡಲು ಗೃಹ ಇಲಾಖೆಗೆ ಸೂಚನೆ – ಸಿಎಂ

ಬೆಂಗಳೂರು: ರಾಜ್ಯದ ಪೊಲೀಸ್ ತರಬೇತಿ ಶಾಲೆಗಳಲ್ಲಿ ಮಹಿಳೆಯರ ಆತ್ಮರಕ್ಷಣೆಗಾಗಿ ವಿಶೇಷ ತರಬೇತಿ ನೀಡಲು ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತಾಶ್ರಯದಲ್ಲಿ ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ ಓಬವ್ವ ಆತ್ಮರಕ್ಷಣಾ ಕಲೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 12 ಪೊಲೀಸ್ ತರಬೇತಿ ಶಾಲೆಗಳಿದ್ದು, ವಿಶೇಷ ತರಬೇತಿ ನೀಡುವ ಮೂಲಕ ಮಹಿಳೆಯರ ಆತ್ಮರಕ್ಷಣೆಗೆ ಸನ್ನದ್ಧರನ್ನಾಗಿ ಮಾಡಲಾಗುವುದು ಎಂದರು.

ಮಹಿಳೆಯರ ಬಗ್ಗೆ ಪೂಜ್ಯ ಭಾವನೆ ಹಾಗೂ ಗೌರವವಿದ್ದರೂ ದುಷ್ಟಶಕ್ತಿಗಳು ಅಮಾನುಷವಾಗಿ ನೋಡುವ ರೀತಿಯಿಂದ ಅಮಾಯಕ ಹೆಣ್ಣು ಮಕ್ಕಳು ನೋವು ಅನುಭವಿಸುತ್ತಿರುವುದನ್ನು ಇಡೀ ವಿಶ್ವದಲ್ಲೇ ನೋಡಿದ್ದೇವೆ.

ಹಲವು ಕಾನೂನು ಹಾಗೂ ಕಾರ್ಯಕ್ರಮಗಳ ಮೂಲಕ ಇಂತಹ ದುಷ್ಟಶಕ್ತಿಗಳನ್ನು ತಡೆಯುವ ಪ್ರಯತ್ನ ಮಾಡಲಾಗುವುದು ಮತ್ತು ಆತ್ಮ ರಕ್ಷಣೆಗೆ ಆತ್ಮವಿಶ್ವಾಸ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಕಾನೂನು, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸರ್ಕಾರ ಒಗ್ಗೂಡಿ ಮಹಿಳೆಯರ ಆತ್ಮರಕ್ಷಣೆ ಮಾಡಬೇಕಾಗಿದೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಉತ್ತಮವಾಗಿದ್ದರೂ ಮಹಿಳೆಯರ ರಕ್ಷಣೆಗೆ ಹೆಚ್ಚಿನ ಪ್ರಾಶಸ್ತ್ಯ ಕೊಡಬೇಕಿದೆ. ಈ ನಿಟ್ಟಿನಲ್ಲಿ ಓಬವ್ವ ಆತ್ಮರಕ್ಷಣೆ ಕಲೆ ತರಬೇತಿ ಉತ್ತಮವಾದುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಅವರ ಉತ್ಸವವನ್ನು ಇದೇ ತಿಂಗಳು ಮಾಡುತ್ತೇವೆ. ಅವರು ಶಕ್ತಿಯ ಪ್ರೇರಣೆಯ ಸ್ವರೂಪ. ಓಬವ್ವ ಒನಕೆಯನ್ನೇ ಅಸ್ತ್ರವಾಗಿ ಬಳಸಿ ಶತ್ರು ಸೈನಿಕರನ್ನು ದಮನ ಮಾಡಿದರು. ಇದರಿಂದ ದಿನನಿತ್ಯ ವಸ್ತುಗಳನ್ನೇ ಆತ್ಮರಕ್ಷಣೆಗಾಗಿ ಬಳಸಬಹುದು ಎಂಬುದಕ್ಕೆ ಪ್ರೇರಣೆ ನೀಡಿದಂತಾಗಿದೆ  ಸಿಎಂ ತಿಳಿಸಿದರು.

ಸುಮಾರು 50 ಸಾವಿರ ಎನ್‍ಸಿಸಿ ಕೆಡೆಟ್‍ಗಳಿಗೆ ಮಿಲಿಟರಿ ಸಮಾನ ತರಬೇತಿ ನೀಡುವ ಉದ್ದೇಶವಿದ್ದು, ರಕ್ಷಣಾ ಸಚಿವರ ಅನುಮತಿ ಸಿಕ್ಕ ನಂತರ ಪ್ರಸಕ್ತ ಸಾಲಿನಲ್ಲಿ ತರಬೇತಿ ನೀಡಲಾಗುವುದು ಎಂದು ಹೇಳಿದರು.

ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ ಸ್ಮರಣಾರ್ಥ 7500 ಹೊಸ ಎನ್‍ಸಿಸಿ ಕೆಡೆಟ್‍ಗಳಿಗೆ ವಾರ್ಷಿಕ ತಲಾ 12 ಸಾವಿರ ರೂ. ನೀಡಲಾಗುವುದು. ಅಲ್ಲದೆ, 75 ಹೊಸ ಯುನಿಟ್ ಪ್ರಾರಂಭಿಸಲಾಗುವುದು ಎಂದರು.