ಮೈಸೂರು:ಹಿಜಾಬ್ ವಿಚಾರದಿಂದಲೇ ಕಾಂಗ್ರೆಸ್ ಸರ್ವನಾಶ ಆಗುವುದು ಖಚಿತ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.
ಮೈಸೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.
ಉಡುಪಿಯಿಂದಲೇ ಕಾಂಗ್ರೆಸ್ ಪಕ್ಷದ ಸರ್ವನಾಶ ಆರಂಭವಾಗಿದೆ. ಈ ಹಿಂದೆ ಗೋ ಹತ್ಯೆ ನಿಷೇಧವನ್ನು ಉಡುಪಿಯಲ್ಲೇ ಮಾಡಿದ್ದರು.ಅಲ್ಲಿಂದ ಅವರ ಪತನ ಪ್ರಾರಂಭವಾಯಿತು, ಚಾಮುಂಡೇಶ್ವರಿಯಲ್ಲೂ ಸೋತರು ಎಂದು ಹೇಳಿದರು.
ಈಗ ಅಲ್ಲಿಂದಲೇ ಹಿಜಾಬ್ ವಿವಾದ ಪ್ರಾರಂಭವಾಗಿದೆ, ಹಿಜಾಬ್ ವಿವಾದದ ಹಿಂದೆ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷ ಇದೆ ಎಂದು ಈಶ್ವರಪ್ಪ ಆರೋಪಿಸಿದರು.
ಓಟ್ ಬ್ಯಾಂಕ್ ಗಾಗಿ ಕಾಂಗ್ರೆಸ್ ಮುಖಂಡರಿಂದ ಈ ಕೆಲಸ ನಡೆದಿದೆ ಅವರು ಮನಸು ಮಾಡಿದ್ದರೆ ಸಮಸ್ಯೆ ಬಗೆಹರಿಸಬಹುದಿತ್ತು ಎಂದು ಹೇಳಿದರು.
ಆ ಆರು ಜನ ವಿದ್ಯಾರ್ಥಿನಿಯರಿಗೆ ತಿಳುವಳಿಕೆ ನೀಡಬಹುದಿತ್ತು.ಕಾಂಗ್ರೆಸ್ ಗೆ ಮುಸ್ಲಿಂ ಮತಗಳೇ ಮುಖ್ಯವಾದವು. ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ಹಿಂದೆ ವೀರಶೈವ, ಲಿಂಗಾಯತ ಧರ್ಮ, ನಂತರ ಮತಾಂತರದ ವಿಷಯ, ಗೋಹತ್ಯೆ. ಈಗ ಹಿಜಾಬ್ ಅವರ ರಾಜಕೀಯ ವಿಚಾರವಾಗಿದೆ. ಹಿಂದೂ ಮುಸ್ಲಿಂ ಒಡೆದಿದ್ದು ಕಾಂಗ್ರೆಸ್. ಅಪವಾದ ನಮ್ಮ ಮೇಲೆ ಹಾಕುತ್ತಿದೆ ಎಂದು ಕಿಡಿಕಾರಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಇನ್ನೂ ಮೂರು ತಿಂಗಳು ಈ ವಿಚಾರ ಪ್ರಸ್ತಾಪ ಇಲ್ಲ. ಪಂಚರಾಜ್ಯ ಚುನಾವಣೆ ಮುಗಿಯುವವರೆಗೂ ಸಂಪುಟ ವಿಸ್ತರಣೆ ಇಲ್ಲ ಎಂದು ತಿಳಿಸಿದರು.
ಈ ಬಗ್ಗೆ ಖುದ್ದು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ. ಇದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಈ ಬಗ್ಗೆ ನನಗೆ ಪಕ್ಷದ ವರಿಷ್ಠರು ಏನೂ ಹೇಳಿಲ್ಲ. ಮಾಧ್ಯಮಗಳಲ್ಲಿ ಬಂದಿರುವುದನ್ನು ಓದಿದ್ದೇನೆ ಎಂದರು.
ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಏನಾಗಬೇಕು ಎಂಬುದನ್ನು ಪಕ್ಷದ ವರಿಷ್ಠ ನಾಯಕರು ನಿರ್ಧರಿಸುತ್ತಾರೆ, ಅವರ ತೀರ್ಮಾನಕ್ಕೆ ನಾನು ಬದ್ದನಾಗಿರುತ್ತೇನೆ ಎಂದು ಈಶು ತಿಳಿಸಿದರು.

