ಮುಂದುವರಿದ ಹಿಜಬ್-ಕೇಸರಿ ವಿವಾದ ಕೆಲವೆಡೆ ಲಾಠಿ ರುಚಿ ತೋರಿದ ಪೊಲೀಸರು

ಬೆಂಗಳೂರು,ಹಿಜಬ್‌   ಕೇಸರಿಶಾಲು   ವಿವಾದ ಕೇವಲ ಮಾತಿನ ಚಕಮಕಿಗೆ ಮಾತ್ರ ಸೀಮಿತವಾಗಿದ್ದುದು ಈಗ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.

ರಾಜ್ಯದ ಕೆಲವು ಕಡೆ ವಿದ್ಯಾರ್ಥಿಗಳು ಕಲ್ಲು ತೂರಾಟ ಮಾಡಿದರೆ ಕೆಲವೆಡೆ ಪೊಲೀಸರು ಲಾಠಿಚಾರ್ಜ್ ಮಾಡಿದ ಘಟನೆ ನಡೆದಿದೆ.

ಶಿವಮೊಗ್ಗದ ಬಾಪೂಜಿನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೇಸರಿಶಾಲು ಹಾಗೂ ಹಿಜಾಬ್ ಧರಿಸಿದ್ದ ವಿದ್ಯಾರ್ಥಿಗಳ ನಡುವೆ ತಳ್ಳಾಟ, ನೂಕಾಟ, ಮಾತಿನ ಚಕಮಕಿ, ಕಲ್ಲು ತೂರಾಟ ಮಾಡಲಾಗಿದೆ.

ಘಟನೆಯಲ್ಲಿ ಒಬ್ಬ ವಿದ್ಯಾರ್ಥಿಯ ತಲೆಗೆ ಪೆಟ್ಟು ಬಿದ್ದಿದ್ದು, ಪರಿಸ್ಥಿತಿ ನಿಯಂತ್ರಿಸಲು  ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.

ಕಾಲೇಜಿನ ಆವರಣದ ಧ್ವಜ ಕಂಬದಲ್ಲಿ ರಾಷ್ಟ್ರಧ್ವಜ ಹಾರಿಸುವ ಬದಲು ಕೇಸರಿ ಧ್ವಜಾರೋಹಣ ಮಾಡಿದ ಘಟನೆಯೂ ನಡೆದಿದೆ.

ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಲು ವಿದ್ಯಾರ್ಥಿನಿಯರಿಗೆ ಅವಕಾಶ ಮಾಡಿಕೊಡಬಾರದು. ಅವರು ಹಿಜಾಬ್ ಧರಿಸಿ ಬಂದರೆ ನಾವು ಕೇಸರಿ ಶಾಲು ಮತ್ತು ಪೇಟಾ ಹಾಕಿಕೊಂಡು ಬರುತ್ತೇವೆ ಎಂದು ಹಿಂದೂ ವಿದ್ಯಾರ್ಥಿಗಳು ಪಟ್ಟು ಹೊಡೆದಿದ್ದಾರೆ.

ಈ ವೇಳೆ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಪೊಲೀಸರು ಎರಡೂ ಕಡೆಯ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ಪದವಿಪೂರ್ವ ಕಾಲೇಜಿನಲ್ಲೂ ಇದೇ ರೀತಿ ಘಟನೆ ನಡೆದಿದೆ.

ಇಲ್ಲೂ ಕೂಡ ಒಬ್ಬ ವಿದ್ಯಾರ್ಥಿ ತಲೆಗೆ ಪೆಟ್ಟಾಗಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದರು. ಇದಕ್ಕೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ಕಾಲೇಜಿನ ಆವರಣದೊಳಗೆ ಬರಲು ಯತ್ನಿಸಿದ್ದಾರೆ.

ಈ ವೇಳೆ ವಿದ್ಯಾರ್ಥಿಗಳ ನಡುವೆ ಆರೋಪ, ಪ್ರತ್ಯಾರೋಪ, ಮಾತಿನ ಚಕಮಕಿ ನಡೆದಿದೆ.

ಹಿಜಾಬ್ ಧರಿಸುವುದು ನಮ್ಮ ಮೂಲಭೂತ ಹಕ್ಕು. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಸ್ಲಿಂ ವಿದ್ಯಾರ್ಥಿಗಳು ಹೇಳಿದರೆ, ಕೇಸರಿ ಕೂಡ ಶಾಂತಿಯ ಸಂಕೇತ. ನಾವು ಕೂಡ ಅದನ್ನೇ ಹಾಕಿ ಬರುತ್ತೇವೆಂದು ಕೆಲ ವಿದ್ಯಾರ್ಥಿಗಳು ಪಟ್ಟು ಹಿಡಿದರು. ಇಲ್ಲೂ ಕೂಡಾ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.

ಹಿಜಬ್ ವಿವಾದಕ್ಕೆ ಮುನ್ನುಡಿ ಬರೆದಿದ್ದ ಉಡುಪಿ ಜಿಲ್ಲೆಯಲ್ಲಿ ಕೂಡ ಅನೇಕ ಕಡೆ ಹಿಜಾಬ್- ಕೇಸರಿ ನಡುವೆ ಸಂಘರ್ಷ ಮುಂದುವರೆದಿದೆ.

ಮಣಿಪಾಲದ ಎಸ್‍ಡಿಎಂ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡು ಬಂದರೆ, ಮತ್ತೊಂದು ಸಮುದಾಯದ ವಿದ್ಯಾರ್ಥಿಗಳು ಕೇಸರಿ ಶಾಲು, ಪೇಟಾ ಹಾಕಿಕೊಂಡು  ಆಗಮಿಸಿ

ಜೈ ಶ್ರೀರಾಮ್ ವಂದೇ ಮಾತರಂ ಎಂದು ಘೋಷಣೆ ಕೂಗಿದರು.

ಕಾಲೇಜು ಆಡಳಿತ ಮಂಡಳಿಯವರು ಎಲ್ಲಾ ವಿದ್ಯಾರ್ಥಿಗಳನ್ನು ಗೇಟ್ ನಲ್ಲೇ ತಡೆದು ಹಿಜಾಬ್ ಇಲ್ಲವೇ ಕೇಸರಿ ಧರಿಸಿ ಬಂದ ಯಾವೊಬ್ಬ ವಿದ್ಯಾರ್ಥಿಗಳನ್ನು ಒಳಗೆ ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಸೂಚನೆ ಕೊಟ್ಟರು.

ಇದರಿಂದ ಕೆರಳಿದ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವುದು ನಮ್ಮ ಧರ್ಮದ ಹಕ್ಕು.  ಬೇಕಾದರೆ ಕೇಸರಿ ಶಾಲು ಹಾಕಿಕೊಂಡು ಬರಲಿ ನಮ್ಮದೇನು ಅಭ್ಯಂತರವಿಲ್ಲ ಎಂದರು.

ಇದನ್ನು ಒಪ್ಪದ ಆಡಳಿತಮಂಡಳಿಯವರು ನಾವು ಸರ್ಕಾರದ ಆದೇಶವನ್ನು ಪಾಲನೆ ಮಾಡುತ್ತೇವೆ. ನ್ಯಾಯಾಲಯದ ತೀರ್ಪು ಏನು ಬರುತ್ತದೋ ಕಾದುನೋಡೋಣ. ಅಲ್ಲಿಯವರೆಗೆ ನಾವು ಯಥಾಸ್ಥಿತಿಯನ್ನು ಕಾಪಾಡುತ್ತೇವೆ ಎಂದು ಹೇಳಿ. ಕಾಲೇಜಿಗೆ ರಜಾ ಘೋಷಿಸಿದರು.

ಚಿಕ್ಕಮಗಳೂರಿನ ಐಡಿಎಸ್‍ಜಿ ಕಾಲೇಜಿನಲ್ಲಿ  ಕೂಡ ವಿವಾದ ಮುಂದುವರೆದಿದೆ. ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬಂದರೆ ಇನ್ನು ಕೆಲವು ವಿದ್ಯಾರ್ಥಿಗಳು ಕೇಸರಿ ಧರಿಸಿಯೇ ಬಂದರು.

ಆದರೆ ಪ್ರಾಂಶುಪಾಲರು  ಯಾವುದಕ್ಕೂ ಅವಕಾಶ ಕೊಡಲಿಲ್ಲ. ಹಿಜಾಬ್ ಧರಿಸಿದ್ದ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಹೊರ ಹೋಗಿದ್ದಾರೆ.

ಮಂಡ್ಯದ ಪಿಯು ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ಕೇಸರಿ ಹಾಕಿಕೊಂಡು ತರಗತಿ ಪ್ರವೇಶಿಸಲು ಯತ್ನಿಸಿದ್ದು ಆಡಳಿತ ಮಂಡಳಿ  ನಿರ್ಬಂಧ ವಿಧಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ವಿಜಾಪುರದ ಚಡಚಣದ ಬಸವೇಶ್ವರ ಕಾಲೇಜಿನಲ್ಲೂ ಕೇಸರಿ ಹಾಗೂ ಹಿಜಾಬ್  ವಿವಾದ ಭುಗಿಲೆದ್ದಿದೆ.  ಆಡಳಿತ ಮಂಡಳಿ ಯಾವುದಕ್ಕೂ ಅವಕಾಶ ನೀಡದೆ ಕಾಲೇಜಿಗೆ ರಜಾ ಘೋಷಿಸಿದೆ.

ಗದಗ, ತುಮಕೂರ, ತಿಪಟೂರು ಮತ್ತಿತರ  ಕಡೆ  ಹಿಜಬ್‌ ಸಂಘರ್ಷ ಮುಂದುವರಿದಿದೆ.