ಬೆಂಗಳೂರು: ಡಬ್ಬಲ್ ಎಂಜಿನ್ ಸರ್ಕಾರ ನಾಡಿಗೆ ಡಬ್ಬಲ್ ದ್ರೋಹ ಎಸಗಿದೆ. ಸರ್ಕಾರ ರಾಜ್ಯಪಾಲರ ಬಾಯಿಂದ ಸುಳ್ಳು ಹೇಳಿಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರ ಭಾಷಣ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರ ರಾಜ್ಯಪಾಲರ ದಿಕ್ಕು ತಪ್ಪಿಸಿ ಅವರ ಮಾತಿನ ಮೂಲಕ ನಾಡಿನ ಜನರ ದಿಕ್ಕು ತಪ್ಪಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕನ್ನಡಿಗರನ್ನು ಸಾಲದ ಪ್ರಪಾತಕ್ಕೆ ತಳ್ಳಿದ್ದರ ಬಗ್ಗೆ ಪ್ರಸ್ತಾಪವೇ ಇಲ್ಲ. ಕೇಂದ್ರ ಸರ್ಕಾರದ ಕೆಲವು ಯೋಜನೆಗಳನ್ನು ತನ್ನ ಯೋಜನೆಗಳು ಎಂದು ಬಿಂಬಿಸಿಕೊಂಡಿದೆ ಎಂದು ಹೇಳಿದರು.
ಯಾವುದೇ ನಾಗರಿಕ ಸರ್ಕಾರಕ್ಕೆ ನಿರ್ಧಿಷ್ಟವಾದ ಗೊತ್ತು-ಗುರಿಗಳಿರುತ್ತವೆ. ಆದರೆ, ರಾಜ್ಯಪಾಲರ ಭಾಷಣ ಕೇಳಿದ ಮೇಲೆ, ಈ ಸರ್ಕಾರಕ್ಕೆ ಯಾವುದೇ ಗೊತ್ತು ಗುರಿಗಳಿಲ್ಲ ಎಂದು ಸ್ಪಷ್ಟವಾಗುತ್ತದೆ ಎಂದರು.
ರಾಜ್ಯದ ಜನರಿಗೆ ಕಲ್ಯಾಣವೂ ಇಲ್ಲ, ಅಭಿವೃದ್ಧಿಯ ಮಾತೇ ಇಲ್ಲ, ಸಾಮಾನ್ಯವಾಗಿ ರಾಜ್ಯಪಾಲರ ಭಾಷಣ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಮುಂದಿನ ವರ್ಷಕ್ಕೆ ಇರಬೇಕಾದ ಮುನ್ನೋಟದ ಗುರಿಗಳನ್ನು ಒಳಗೊಂಡಿರುತ್ತದೆ. ಈ ಸರ್ಕಾರ ಕಳೆದ ಒಂದು ವರ್ಷದಿಂದ ಏನನ್ನೂ ಮಾಡಿಲ್ಲ ಎಂಬುದಕ್ಕೆ ರಾಜ್ಯಪಾಲರ ಭಾಷಣವೇ ಸಾಕ್ಷಿ ಎಂದು ಸಿದ್ದು ಹೇಳಿದರು.
ರಾಜ್ಯದಲ್ಲಿ ನಿರುದ್ಯೋಗ ತಾಂಡವ ಆಡುತ್ತಿದೆ. ಆದರೆ, ನಿರುದ್ಯೋಗವನ್ನು ಪರಿಹರಿಸಲು ಏನನ್ನೂ ಮಾಡಿಲ್ಲ ಎಂಬುದನ್ನು ಸರ್ಕಾರವೇ ಪ್ರಾಮಾಣಿಕವಾಗಿ ಒಪ್ಪಿಕೊಂಡಿದೆ ಎನ್ನುವುದು ರಾಜ್ಯಪಾಲರ ಭಾಷಣದ ಮೂಲಕ ಸ್ಪಷ್ಟವಾಗುತ್ತದೆ ಎಂದರು.
ಅಮೃತ ಗ್ರಾಮ ಪಂಚಾಯ್ತಿ ಯೋಜನೆ ಅಡಿ ಗ್ರಾಮ ಪಂಚಾಯ್ತಿಗಳಿಗೆ ೨೫ ಲಕ್ಷ ಕೊಡುವುದನ್ನೆ ಸರ್ಕಾರ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. ಆದರೆ, ನಮ್ಮ ಸರ್ಕರ ಇದ್ದಾಗ ಸಾವಿರ ಗ್ರಾಮ ಪಂಚಾಯ್ತಿಗಳಿಗೆ ತಲಾ ಒಂದು ಕೋಟಿ ರೂಪಾಯಿ ನೀಡಿದ್ದೆವು ಎಂದರು.
ಕೋವಿಡ್ ಎರಡನೇ ಅಲೆಯಲ್ಲಿ ಸರ‍್ಕಾರದ ನಿರ್ಲಕ್ಷ್ಯದಿರಿಂದಲೇ ಲಕ್ಷಾಂತರ ಜನ ಮರಣ ಹೊಂದಿದರು. ಸರಿಯಾಗಿ ಆಕ್ಸಿಜನ್ ವ್ಯವಸ್ಥೆ, ಬೆಡ್‌ಗಳು, ಔಷಧಿ, ಆಂಬುಲೆನ್ಸ್, ಆಸ್ಪತ್ರೆ, ವೈದ್ಯರು, ದಾದಿಯರು, ಇತ್ಯಾದಿ ಯಾವುದೇ ಸಿದ್ಧತೆಗಳನ್ನು ಮಾಡಿಕೊಳ್ಳದೆ ಜನರನ್ನು ಬೀದಿ ಬೀದಿಯಲ್ಲಿ ಕೊಂದು ಹಾಕಿದರು. ಅದಕ್ಕೆ ಒಂದು ಸಣ್ಣ ಪಶ್ಚಾತ್ತಾಪವೂ ಇಲ್ಲ.
ಪತ್ರಕರ್ತರಿಗೆ ಮಾನ್ಯತೆ ಪತ್ರ ಹಾಗೂ ಬಸ್ ಪಾಸ್ ಸೌಲಭ್ಯವನ್ನು ಈ ಹಿಂದಿನಿಂದಲೂ ಒದಗಿಸಲಾಗುತ್ತಿದೆ. ಆದರೂ ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಇದು ತನ್ನ ಸಾಧನೆ ಎಂದು ಹೇಳಿಕೊಂಡಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ಈ ಸರ್ಕಾರ ಅತ್ಯಂತ ನಿಷ್ಕ್ರಿಯವಾಗಿದೆ. ವೈಫಲ್ಯಗಳಿಂದ ಕೂಡಿದೆ. ಜನರಿಗಾಗಿ ಏನೂ ಮಾಡುತ್ತಿಲ್ಲ ಎಂಬುದು ರಾಜ್ಯಪಾಲರ ಭಾಷಣದಿಂದ ಸ್ಪಷ್ಟವಾಗಿದೆ ಎಂದು ತಿಳಿಸಿದರು.
ನಾನು ನನ್ನ ರಾಜಕೀಯ ಅನುಭವದ ಮೇಲೆ ಹೇಳುವುದಾದರೆ ಇಷ್ಟೊಂದು ಕೆಟ್ಟದಾದ ಭಾಷಣವನ್ನು ಎಂದೂ ಕೇಳಿರಲಿಲ್ಲ. ಏನನ್ನೂ ಮಾಡದ ಸರ್ಕಾರವನ್ನು ಆರಿಸಿ ಕಳುಹಿಸಿದ್ದು ಈ ನಾಡಿನ ದೌರ್ಭಾಗ್ಯ ಎಂಬುದು ರಾಜ್ಯಪಾಲರ ಭಾಷಣದಿಂದ ರಾಜ್ಯದ ಜನರಿಗೆ ಇಂದು ಅರ್ಥವಾಗಿದೆ.
ರೈತರಾದಿಯಾಗಿ ಸಮಸ್ತ ದುಡಿಯುವ ಜನ, ಸಮಸ್ತ ದಲಿತ ಮತ್ತು ಮಹಿಳಾ ಸಮುದಾಯ ಎಲ್ಲರೂ ಭೀಕರ ಸಂಕಷ್ಟದಲ್ಲಿದ್ದಾರೆ ಎಂಬುದು ಈ ಸರ್ಕಾರಕ್ಕೆ ಇನ್ನೂ ಮನದಟ್ಟಾಗಿಲ್ಲ. ಅಥವಾ ಉದ್ದೇಶಪೂರ್ವಕವಾಗಿಯೇ ಈ ವರ್ಗಗಳನ್ನು ಸರ್ಕಾರ ದಮನ ಮಾಡುತ್ತಿದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಸಿದ್ದು ಆಕ್ರೋಶ ವ್ಯಕ್ತಪಡಿಸಿದರು.

