ಹಿಜಬ್ ಗೆ ಪಟ್ಟು ಹಿಡಿದು ತರಗತಿಗಳನ್ನು ಬಹಿಷ್ಕರಿಸಿದ ವಿದ್ಯಾರ್ಥಿನಿಯರು

ಬೆಂಗಳೂರು: ಹಿಜಬ್ ವಿವಾದದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ಬಂದ್ ಆಗಿದ್ದ ಪದವಿ, ಪದವಿಪೂರ್ವ ಕಾಲೇಜುಗಳು ಆರಂಭವಾಗಿದ್ದರೂ ಕೆಲವೆಡೆ ವಿದ್ಯಾರ್ಥಿನಿಯರು ಹಿಜಬ್‍ಗಾಗಿ ಪಟ್ಟು ಹಿಡಿದು ತರಗತಿಗಳನ್ನು ಬಹಿಷ್ಕರಿಸಿದ ಘಟನೆಗಳು ನಡೆದಿವೆ.

ತುಮಕೂರು, ಶಿವಮೊಗ್ಗ, ಬೆಳಗಾವಿ, ಕೊಪ್ಪಳ, ಯಾದಗಿರಿ, ದಕ್ಷಿಣ ಕನ್ನಡ, ಬಳ್ಳಾರಿ, ಕೋಲಾರ, ಚಿತ್ರದುರ್ಗ ಮುಂತಾದ ಕಡೆ ವಿದ್ಯಾರ್ಥಿನಿಯರು ಕಾಲೇಜುಗಳಿಗೆ ಹಿಜಬ್ ಧರಿಸಿಯೇ ಬಂದಿದ್ದರು.

ತುಮಕೂರಿನ ಸರ್ಕಾರಿ ಪಬ್ಲಿಕ್ ಶಾಲೆಗೆ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಜಬ್ ಧರಿಸಿಯೇ ಬಂದಿದ್ದರು.

ಈ ವೇಳೆ ಹಿಜಬ್ ತೆಗೆಯುವಂತೆ ಕಾಲೇಜು ಸಿಬ್ಬಂದಿ ಹೇಳಿದರೂ ಕೇಳದೆ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದರು.

ನ್ಯಾಯಾಲಯದ ಆದೇಶವಿರುವ ಹಿನ್ನೆಲೆಯಲ್ಲಿ ಅದನ್ನು ಎಲ್ಲರು ಪಾಲಿಸಬೇಕೆಂದು ಸಿಬ್ಬಂದಿ ಮನವಿ ಮಾಡಿದರೂ ವಿದ್ಯಾರ್ಥಿನಿಯರು ಹಿಜಬ್ ತೆಗೆಯದೆ ಘೋಷಣೆಗಳನ್ನು ಕೂಗಿದರು.

ಪೊಲೀಸರು ಮತ್ತು ಆಡಳಿತ ಮಂಡಳಿ ವಿದ್ಯಾರ್ಥಿನಿಯರ ಮನವೊಲಿಸಲು ಯತ್ನಿಸಿದರು. ಆದರೆ ಘೋಷಣೆಗಳನ್ನು ಕೂಗುತ್ತಾ ಟೌನ್‍ಹಾಲ್ ಸರ್ಕಲ್ ಮೂಲಕ ಮೆರವಣಿಗೆ ನಡೆಸಿ ವಾಪಸ್ ಕಾಲೇಜಿಗೆ ತೆರಳಲು ಯತ್ನಿಸಿದವರನ್ನು ಪೊಲೀಸರು ತಡೆದರು.

ಶಿವಮೊಗ್ಗದ ಡಿವಿಎಸ್ ಕಾಲೇಜಿನ ಮುಂಭಾಗವು ಕೂಡ ಹಿಜಬ್ ಹೈಡ್ರಾಮ ನಡೆದಿದೆ. ಇಲ್ಲಿ ಹಲವು ವಿದ್ಯಾರ್ಥಿನಿಯರು ಯಾವುದೇ ಕಾರಣಕ್ಕೂ ನಾವು ಹಿಜಬ್ ತೆಗೆಯುವುದಿಲ್ಲ ಎಂದು ಮೊಂಡಾಟ ಪ್ರದರ್ಶಿಸಿದರು.

ನ್ಯಾಯಾಲಯದ ಆದೇಶದ ಬಗ್ಗೆ ಮನವರಿಕೆ ಮಾಡಿಕೊಟ್ಟರೂ ಬಗ್ಗಲಿಲ್ಲ.

ಬಳ್ಳಾರಿಯಲ್ಲೂ ಹಿಜಬ್ ವಿವಾದ ಪ್ರಾರಂಭವಾಗಿದ್ದು, ಹಿಜಾಬ್ ನಮ್ಮ ಧಾರ್ಮಿಕ ಹಕ್ಕು ಎಂದು  ವಿದ್ಯಾರ್ಥಿನಿಯರು ಪಟ್ಟು ಹಿಡಿದರು.

ಕೆಲವು ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಕಾಲೇಜಿಗೆ ತೆರಳಿದರೆ ಮತ್ತೆ ಕೆಲವರು ನಿರಾಕರಿಸಿ ಹಿಂದಿರುಗಿದರು.

ಇಲ್ಲಿನ ಸರಳದೇವಿ ಕಾಲೇಜಿನಲ್ಲಿ ಹಿಜಾಬ್ ಕುರಿತು ವಿದ್ಯಾರ್ಥಿನಿಯರಲ್ಲಿ ಭಿನ್ನಮತ ವ್ಯಕ್ತವಾಗಿದೆ. ಯಾದಗಿರಿ ಜಿಲ್ಲೆಯ ಹಲವು ಕಾಲೇಜುಗಳಲ್ಲಿ ಹಿಜಾಬ್‍ಗೆ ಅವಕಾಶ ಕೊಡುವುದಿಲ್ಲ ಎಂದರೆ ನಾವು ಮನೆಗೆ ಹೋಗುತ್ತೇವೆ ಎಂದು ವಿದ್ಯಾರ್ಥಿನಿಯರು ಹಠ ಹಿಡಿದರು.

ಹಿಜಾಬ್ ಹಾಗೂ ಬುರ್ಕಾ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪೋಷಕರು ಸಾಥ್ ನೀಡಿದ್ದು, ಪೊಲೀಸರು , ಪೋಷಕರು, ಪ್ರಾಂಶುಪಾಲರ ನಡುವೆ ವಾಗ್ವಾದ ನಡೆದಿದೆ.

ರಾಯಚೂರಿನ ಸರ್ಕಾರಿ ಕಾಲೇಜಿನಲ್ಲೂ ಸಹ ಹಿಜಬ್, ಬುರ್ಕಾ ಗೊಂದಲ ಮುಂದುವರೆದಿದ್ದು ಪ್ರಾಂಶುಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ತರಗತಿಯೊಳಗೆ ವಿದ್ಯಾರ್ಥಿನಿಯರನ್ನು ಬಿಡದ ಕಾರಣ ಕೊಠಡಿಯ ಮುಂದೆಯೇ ಅವರು ಪ್ರತಿಭಟನೆ ನಡೆಸಿದರು.

ಅಧಿಕಾರಿಗಳ ಮನವೊಲಿಕೆಗೂ ಬಗ್ಗದೆ ವಿದ್ಯಾರ್ಥಿನಿಯರು ಹಿಜಬ್‍ಗಾಗಿ ಪಟ್ಟು ಹಿಡಿದರು ಹಾಗಾಗಿ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರಕಳುಹಿಸಲಾಗಿದೆ.

ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಹಿಜಬ್ ಧರಿಸಿಯೇ ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾದರು.

ಸಮವಸ್ತ್ರ ಕಡ್ಡಾಯವಿಲ್ಲದ ಕಾಲೇಜುಗಳಲ್ಲಿ ಹಿಜಬ್ ವಿವಾದ ಕಂಡುಬರಲಿಲ್ಲ. ಆದರೆ ಸಮವಸ್ತ್ರ ಕಡ್ಡಾಯಗೊಳಿಸಿದ ಬಹುತೇಕ ಕಾಲೇಜುಗಳಲ್ಲಿ ಹಿಜಾಬ್ ರಗಳೆ ಮುಂದುವರೆದಿತ್ತು.