ಕುಶಿನಗರ: ವಿವಾಹ ಸಮಾರಂಭದ ಗಂಗಾ ಪೂಜೆ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಹದಿಮೂರು ಮಹಿಳೆಯರು ಮತ್ತು ಬಾಲಕಿ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಸಂಭವಿಸಿದೆ.
ಈ ಘೋರ ಘಟನೆ ನೌರಂಗಿಯಾ ಟೋಲಾ ಗ್ರಾಮದಲ್ಲಿ ನಡೆದಿದೆ.
ಮಹಿಳೆಯರು ಮತ್ತು ಮಕ್ಕಳು ಕುಳಿತಿದ್ದ ಕಬ್ಬಿಣದ ಗ್ರಿಲ್ ಏಕಾಏಕಿ ಮುರಿದು ಬಾವಿಗೆ ಬಿದ್ದ ಕಾರಣ ಮಹಿಳೆಯರು ಅದರೊಂದಿಗೆ ಬಾವಿಗೆ ಬಿದ್ದಿದ್ದಾರೆ ಈ ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಬುಧವಾರ ರಾತ್ರಿ ವಿವಾಹ-ಪೂರ್ವ ಆಚರಣೆಯಾದ ಹಳದಿ ಶಾಸ್ತ್ರ ನಡೆಯುತ್ತಿತ್ತು. ಕೆಲವು ಮಹಿಳೆಯರು ಮತ್ತು ಮಕ್ಕಳು ಕಬ್ಬಿಣದ ಗ್ರಿಲ್ ಮೇಲೆ ಕುಳಿತಿದ್ದರು. ಆಗ ಗ್ರಿಲ್ ಹಠಾತ್ತನೆ ಮುರಿದ ಕಾರಣ ಅವರೆಲ್ಲ ಬಾವಿಗೆ ಬಿದ್ದಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ರಾಜಲಿಂಗಂ ಸ್ಪಷ್ಟಪಡಿಸಿದರು
ಲಭ್ಯ ಮಾಹಿತಿಯ ಪ್ರಕಾರ ಪೂಜಾ, ಶಶಿಕಲಾ, ಶಾಕುಂತಲ, ಮಮತಾ ದೇವಿ, ಮೀರಾ, ಪೂಜಾ , ಪಾರಿ, ಜ್ಯೋತಿ , ರಾಧಿಕಾ, ಸುಂದರಿ, ಆರತಿ, ಪಪ್ಪಿ, ಮನು ಹಾಗೂ ಪುಟ್ಟ ಬಾಲಕಿ ಮೃತರಾಗಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಮೃತರ ಕುಟುಂಬದವರಿಗೆ ತಲಾ 4 ಲಕ್ಷ ರೂ.ಗಳ ನೆರವು ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಘಟನೆಯ ಬಗ್ಗೆ ಟ್ವೀಟ್ ಮಾಡಿ ವಿಷಾದಿಸಿ, ಇದೊಂದು ಹೃದಯ ವಿದ್ರಾವಕ ಘಟನೆಯಾಗಿದೆ ಎಂದು ಹೇಳಿದ್ದಾರೆ.

