ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಬಿಗಿ ಪಟ್ಟು: ಅಧಿವೇಶನ ಮುಂದೂಡಿಕೆ

ಬೆಂಗಳೂರು: ಸಚಿವ ಈಶ್ವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷದ ಕಾಂಗ್ರೆಸ್ ಸದಸ್ಯರು ‌ ಧರಣಿ ಮುಂದುವರಿಸಿದ್ದರಿಂದ ವಿಧಾನ‌ ಮಂಡಲ ಅಧಿವೇಶನವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

ಕಾಂಗ್ರೆಸ್ ಸದಸ್ಯರು ನಡೆಸುತ್ತಿರುವ ಅಹೋರಾತ್ರಿ ಧರಣಿಯನ್ನು ಕೈಬಿಡಬೇಕೆಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಬೆಳಿಗ್ಗೆ ನಡೆಸಿದ ಸಂಧಾನ ವಿಫಲವಾಯಿತು.

ಬೆಳಗ್ಗೆ ಸದನ ಆರಂಭವಾಗುವ ಮೊದಲು ಸಭಾಧ್ಯಕ್ಷರಾದ ಕಾಗೇರಿ ಅವರು ತಮ್ಮ ಕಚೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರುಗಳೊಂದಿಗೆ ಸಭೆ ನಡೆಸಿದರು.

ಧರಣಿ ಕೈಬಿಟ್ಟು ಚರ್ಚೆಯಲ್ಲಿ ಪಾಲ್ಗೊಳ್ಳಿ. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆಯಾಗಬೇಕು. ಸದಸ್ಯರು ತಮ್ಮ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಸಚಿವರಿಂದ ಉತ್ತರ ಪಡೆಯಬೇಕಿದೆ ಹೀಗಾಗಿ ನಿಮ್ಮ ಧರಣಿಯನ್ನು ಕೈಬಿಡಿ ಎಂದು ಕಾಗೇರಿ ಮನವಿ ಮಾಡಿದರು.

ಸಭಾಧ್ಯಕ್ಷರು ಮತ್ತು ಸಿಎಂ ಬೊಮ್ಮಾಯಿ ಮತ್ತಿತರರ ಸಂಧಾನವನ್ನು ಒಪ್ಪದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್  ನಾವು ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ,ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಈಶ್ವಪ್ಪ  ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಇತ್ತ ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ರಾಜಿನಾಮೆಗೆ ಪಟ್ಟು ಹಿಡಿದರು.

ಈ ವೇಳೆ ಈಶ್ವರಪ್ಪ ಅವರು ಪರಿಷತ್ ಗೆ ಆಗಮಿಸಿದರು. ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿ‌ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.ಆದರೂ ಏನನ್ನೂ ಮಾತನಾಡದೆ‌ ಅವರು ಮೌನವಾಗಿದ್ದರು.

ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಪರಿಷತ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ವಿಧಾನಸಭೆಯಲ್ಲೂ ಧರಣಿ ಮುಂದುವರಿದ ಕಾರಣ ಸಭಾಧ್ಯಕ್ಷರು ಸದನವನ್ನು ಸೋಮವಾರಕ್ಕೆ ಮುಂದೂಡಿದರು.