ಮಾನವ ಜನ್ಮವನ್ನು ಎಲ್ಲರೂ ಸಾರ್ಥಕಪಡಿಸಿಕೊಳ್ಳಿ – ಡಿ. ಟಿ. ಪ್ರಕಾಶ್

ಮೈಸೂರು: ಭಗವಂತನು ಕೊಟ್ಟ ಮಾನವ ಜನ್ಮವನ್ನು ಎಲ್ಲರೂ ಸಾರ್ಥಕಪಡಿಸಿಕೊಳ್ಳಬೇಕು ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ. ಟಿ. ಪ್ರಕಾಶ್   ತಿಳಿಸಿದರು.

ಅಗ್ರಹಾರದ ಉತ್ತರಾದಿ ಮಠದಲ್ಲಿ  ಶ್ರೀ ಗುರು ರಾಘವೇಂದ್ರ ಟ್ರಸ್ಟ್ ಆಯೋಜಿಸಿದ್ದ ಜಯತೀರ್ಥರ ಆರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.

ದೇವರ ಪೂಜೆ,ಹವನ,ಹೋಮ,ಆಧ್ಯಾತ್ಮಿಕ ಚಿಂತನೆ, ಸಾಮಾಜಿಕ ಸೇವಾಚಟುವಟಿಕೆಗಳು, ಕಷ್ಟದಲ್ಲಿ ಸಿಲುಕಿದವರಿಗೆ ಸಹಾಯ ಮಾಡುವುದು ಎಲ್ಲರನ್ನೂ ಸಮಾನತೆಯಿಂದ ನೋಡುವುದು ಮುಂತಾದ ಗುಣಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಮ್ಮೆಲ್ಲರ ಬದುಕಿಗೆ ಹೆಚ್ಚು ಚೈತನ್ಯ ತುಂಬುವ ಶಕ್ತಿ ಆಧ್ಯಾತ್ಮಿಕ ಚಿಂತನೆ ಎಂದರು.

ಉತ್ತರಾದಿ ಮಠದ ಮಠಾಧಿಕಾರಿ ಪಂಡಿತ್ ಅನಿರುದ್ಧ್ ಆಚಾರ್ ಮಾತನಾಡಿ, ಟೀಕಾಚಾರ್ಯ ಎಂದೇ ಖ್ಯಾತರಾಗಿರುವ ಜಯತೀರ್ಥರು ಹಿಂದೂ ದಾರ್ಶನಿಕರು ಎಂದು ತಿಳಿಸಿದರು.

ವಿಚಾರವಾದಿ ಹಾಗೂ ಮಧ್ವಾಚಾರ್ಯ ಪೀಠದ ಆರನೇ ಮುಖ್ಯಸ್ಥರಾಗಿದ್ದರು ಎಂದು ಹೇಳಿದರು.

ದ್ವೈತ  ತತ್ವವನ್ನು ಇಡೀ ದೇಶ ಸುತ್ತಿ ಪ್ರಚಾರ ಮಾಡಿದ ಅವರು, ತತ್ವಶಾಸ್ತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಬಣ್ಣಿಸಿದರು.

ಸುಮಾರು 600 ವರ್ಷಗಳ ಹಿಂದೆ ಜಯತೀರ್ಥರು ಕಲಬುರಗಿ ಜಿಲ್ಲೆಯ ಮಾಳಖೇಡಕ್ಕೆ ಬಂದು ಕಾಗಿಣಾ ನದಿ ಬಳಿ ಸಮಾಧಿಯಾಗಿದ್ದಾರೆ.

ಅಂದಿನಿಂದ ಅವರ ಬೃಂದಾವನವು ಪವಿತ್ರ ಸ್ಥಳವಾಗಿದೆ. ಅಲ್ಲಿ ನಡೆಯುವ ಆರಾಧನೆಯಲ್ಲಿ ದೇಶಾದ್ಯಂತ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ ಎಂದು ವಿವರಿಸಿದರು.

ಶ್ರೀ ಕೃಷ್ಣ ಮಿತ್ರ ಮಂಡಳಿ ಅಧ್ಯಕ್ಷ ಸುಬ್ರಹ್ಮಣ್ಯ ತಂತ್ರಿ ,ಶ್ರೀ ಗುರು ರಾಘವೇಂದ್ರ ಟ್ರಸ್ಟ್ ಅಧ್ಯಕ್ಷ ಎಸ್.ಬಿ.ವಾಸುದೇವ ಮೂರ್ತಿ,ಮೈಸೂರು ನಗರ- ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್,ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ,ರಂಗನಾಥ್,ವಿಜಯ ವಿಠಲ ಆಚಾರ್ಯ,ವಿದ್ವಾನ್ ಗೋವಿಂದಾಚಾರ್ ಮತ್ತಿತರರು ಹಾಜರಿದ್ದರು.