ಬಳ್ಳಾರಿ : ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೆ ಹೆಚ್ಚು ಮಳೆ ಬರುತ್ತದೆ. ಇದರಿಂದಾಗಿ ತಮಿಳುನಾಡು ಕೊಡಿತ್ತಿದ್ದ ಕಾವೇರಿ ಕಾಟ ಕೂಡ ತಪ್ಪಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಕೂಡ್ಲಿಗಿಯಲ್ಲಿ ಅಶೋಕ್ ಅವರು ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರವಿದ್ದರೆ ಬರಗಾಲ ಬರುವುದೇ ಇಲ್ಲ. ಅಷ್ಟೇ ಅಲ್ಲ ಅತಿ ಹೆಚ್ಚು ಮಳೆಯಾಗಿ ತಮಿಳುನಾಡು ಬೇಡವೆಂದು ಹೇಳುವಷ್ಟು ನೀರು ಬಿಟ್ಟಿದ್ದೇವೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಬಗ್ಗೆ ಮಾತನಾಡಿ, ಕಂದಾಯದ ದಾಖಲೆ ಮನೆ ಬಾಗಿಲಿಗೆ ಸಲ್ಲಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಭೂಕಬಳಿಕೆ ಕಾನೂನು ಬದಲಾವಣೆ ಮಾಡಿದ್ದೇವೆ. ರೈತರ ಮೇಲೆ ಕೇಸ್ ಹಾಕುವುದಿಲ್ಲ ಎಂದು ಭರವಸೆ ನೀಡಿದರು.
ಭ್ರಷ್ಟಾಚಾರ ಮತ್ತು 40% ಕಮಿಷನ್ ಬಗ್ಗೆ ನಾವು ಮಾತನಾಡಿದರೆ ಲಿಂಗಾಯತ ವಿರೋಧಿ ಅಂತ ಹೇಳ್ತಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಅಶೋಕ್ ಪ್ರತಿಕ್ರಿಯಿಸಿದರು.
ಬಸವರಾಜ ಬೊಮ್ಮಾಯಿಯವರು ಜೈಲಿಗೆ ಹೋಗಿ ಬಂದಿಲ್ಲ. ದೆಹಲಿಯಿಂದ ರಾಜ್ಯದವರೆಗೂ ಕಾಂಗ್ರೆಸ್ ನಾಯಕರು ಜಾಮೀನಿನ ಮೇಲೆ ಇದ್ದಾರೆ. ಯಾರ್ಯಾರು ಕಮಿಷನ್ ತಿಂದಿದ್ದಾರೋ ಅವರು ಜೈಲಿಗೆ ಹೋಗಿ ಬಂದಿದ್ದಾರೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಇಷ್ಟು ವರ್ಷಗಳ ಕಾಲ ಆಡಳಿತ ನಡೆಸಿ ಏನು ಮಾಡಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಮೂಲೆ ಗುಂಪಾಗಿರುವ ಪಾರ್ಟಿ ಅದು. ಆ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು

