ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪರವಾಗಿ ಯಾರೇ ಧ್ವನಿ ಎತ್ತಿದರೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪಿಎಫ್‍ಐ ಸೇರಿದಂತೆ ಅದರ 8 ಅಂಗಸಂಸ್ಥೆಗಳನ್ನು ಐದು ವರ್ಷಗಳ ಕಾಲ ನಿಷೇಧ ಮಾಡಿದೆ ಎಂದು ಹೇಳಿದರು.
ಒಂದು ವೇಳೆ ಈ ಸಂಘಟನೆ ಪರವಾಗಿ ಹೋರಾಟ ಅಥವಾ ಪ್ರತಿಭಟನೆ ನಡೆಸಿದರೆ ಅಂಥವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಕೇಂದ್ರದ ಸೂಚನೆಯಂತೆ ಈಗಾಗಲೇ ರಾಜ್ಯದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಯಾವುದೇ ಗಲಭೆಯಾಗದಂತೆ ಕ್ರಮವಹಿಸಲಾಗಿದೆ.
ನಿಷೇದಿತ ಈ ಸಂಘಟನೆ ಹೆಸರಿನಲ್ಲಿ ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ತಿಳಿಸಿದರು.
ಯಾವುದೇ ಸಂಘಟನೆ, ರಾಜಕೀಯ ಪಕ್ಷಗಳು ದೇಶದ್ರೋಹಿ ಕೆಲಸದಲ್ಲಿ ಭಾಗವಹಿಸಿದ್ದರೆ ಅಂಥವರ ಮೇಲೆ ಕ್ರಮ ಕೈಗೊಳ್ಳುತ್ತೇವೆ.
ಪಿಎಫ್‍ಐ ಹಾಗೂ ಅದರ 8 ಅಂಗಸಂಸ್ಥೆಗಳನ್ನು ನಿಷೇಧಿಸಿದ ಕಾರಣ ಕೆಲವು ಸಮಾಜಘಾತುಕ ಶಕ್ತಿಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಹುದು ಎಂಬ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಪಿ ತುಕಡಿ ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಪಿಎಫ್‍ಐ ಜೊತೆಗೆ ಎಸ್‍ಡಿಪಿಐ ಸಂಘಟನೆಯನ್ನು ರಾಜ್ಯ ಸರ್ಕಾರ ನಿಷೇಧ ಮಾಡಲಿದೆಯೇ ಎಂಬ ಪ್ರಶ್ನೆಗೆ ಒಂದು ಸಂಘಟನೆಯನ್ನು ನಿಷೇಧ ಮಾಡಬೇಕಾದರೆ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕಲೆ ಹಾಕಬೇಕಾಗುತ್ತದೆ ಎಂದು ಹೇಳಿದರು.
ಎಸ್‍ಡಿಪಿಐ ಒಂದು ರಾಜಕೀಯ ಮಾನ್ಯತೆ ಇರುವ ಸಂಘಟನೆ. ಅದನ್ನು ನಿಷೇಧ ಮಾಡಬೇಕೆಂದರೆ ನೀತಿ-ನಿಯಮಗಳು ಇರುತ್ತವೆ.
ಒಂದು ವೇಳೆ ಎಸ್‍ಡಿಪಿಐ ಭಯೋತ್ಪಾದಕ ಸಂಘಟನೆಗಳಿಗೆ ಕುಮ್ಮುಕು ಕೊಡುವುದು ಇಲ್ಲವೇ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಸಾಬೀತಾದರೆ ಅದನ್ನೂ ನಿಷೇಧ ಮಾಡಲಾಗುವುದು ಎಂದು ಹೇಳಿದರು.
ಮುಸ್ಲಿಂ ಮತವನ್ನು ವಿಭಜನೆ ಮಾಡಲು ಎಸ್‍ಡಿಪಿಐ ನಿಷೇಧ ಮಾಡಿಲ್ಲ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಅರಗ ಜ್ಞಾನೇಂದ್ರ , ಇದು ಆ ಪಕ್ಷದ ಬೌದ್ಧಿಕ ದಿವಾಳಿತನ ತೋರುತ್ತದೆ ಎಂದು ಆರಗ ಜ್ಞಾನೇಂದ್ರ ಕಿಡಿಕಾರಿದರು.

