ನವದೆಹಲಿ: ಪಿಎಫ್ಐ ಮೇಲೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನವರಿಗೆ ಈಗಲೂ ಒಳಗೊಳಗೆ ಪ್ರೀತಿ ಇದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕಟಕಿಯಾಡಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಸಚಿವರು ರಾಷ್ಟ್ರೀಯ ಸುರಕ್ಷತೆ ವಿಚಾರದಲ್ಲಿ ಬಿಜೆಪಿ ಮತಬ್ಯಾಂಕ್ ರಾಜಕಾರಣ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಬಿಜೆಪಿ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿರುವುದನ್ನು ಕಂಡು ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಒಳಗೊಳಗೆ ಕುದಿಯುತ್ತಿದೆ.
ಪಿಎಫ್ಐ ಎಸಗುತ್ತಿದ್ದ ಭಯೋತ್ಪಾದಕ ಚಟುವಟಿಕೆಗಳು, ದೇಶದ್ರೋಹ ಕೃತ್ಯಗಳ ಬಗ್ಗೆ ಜನರಿಗೆ ಮಾಹಿತಿ ಇದೆ.ಈ ಸಂದರ್ಭದಲ್ಲಿ ಪಿಎಫ್ಐ ಬ್ಯಾನ್ ಮಾಡಿರುವುದನ್ನು ವಿರೋಧಿಸಿದರೆ ಜನ ಒದೆಯುತ್ತಾರೆ ಅಷ್ಟೇ ಎಂದು ತಿಳಿಸಿದರು.
ಬಿಜೆಪಿ ಸರ್ಕಾರದ ನಿಲುವನ್ನು ವಿರೋಧಿಸಲು ಕಾಂಗ್ರೆಸ್ ಗೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಪಿಎಫ್ಐ ವಿರುದ್ಧ ದೇಶದ್ರೋಹದ ಕೃತ್ಯಗಳ ಸಾಕಷ್ಟು ಸಾಕ್ಷಿಗಳು ನಮ್ಮ ಬಳಿ ಇವೆ.
ಹೀಗಾಗಿ ಏನಾದರು ಮಾಡಿ ಮುಸ್ಲಿಂ ಓಲೈಕೆ ಮಾಡಬೇಕು ಎಂಬ ಕಾರಣಕ್ಕೆ ಆರ್‌ಎಸ್ಎಸ್ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ ಎಂದು ಟೀಕಿಸಿದರು.
ಆರ್‌ಎಸ್ಎಸ್ ಅನ್ನು ಯಾವ ಆಧಾರದ ಬ್ಯಾನ್ ಮಾಡುತ್ತೀರಾ ಈ ಹಿಂದೆ ಕಾಂಗ್ರೆಸ್ ಸರ್ಕಾರ ಮೂರು ಬಾರಿ ಆರ್‌ಎಸ್ಎಸ್ ಬ್ಯಾನ್ ಮಾಡಿತ್ತು ಬ್ಯಾನ್ ಮಾಡಿ ಕಾಂಗ್ರೆಸ್ ಏನು ಸಾಧಿಸಿತು ಎಂದು ಖಾರವಾಗಿ ಜೊಶಿ ಪ್ರಶ್ನಿಸಿದರು.
ಆರ್‌ಎಸ್ಎಸ್ ಒಂದು ರಾಷ್ಟ್ರೀಯವಾದಿ ಸಂಘಟನೆ. ದೇಶದ ಪರ ಕೆಲಸ ಮಾಡುತ್ತಿರುವ ಸಂಘಟನೆ ಎಂದು ಹೇಳಿದರು.
ದೇಶದಾದ್ಯಂತ ಹಲವು ಹತ್ಯೆಗಳಲ್ಲಿ ಪಿಎಫ್‌ಐ ಸಂಘಟನೆ ಕೈವಾಡವಿರುವುದು ಸ್ಪಷ್ಟವಾಗಿದೆ. ಎಲ್ಲ ಸಾಕ್ಷಿಗಳನ್ನು ಕಲೆಹಾಕಿಯೇ ಕೇಂದ್ರ ಬಿಜೆಪಿ ಸರ್ಕಾರ ಇದನ್ನು ಬ್ಯಾನ್ ಮಾಡಿದೆ.
ಎಸ್ ಡಿಪಿಐ ಒಂದು ಪೊಲಿಟಿಕಲ್ ಪಾರ್ಟಿ. ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ತನ್ನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

