ಮೈಸೂರು: ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಭಾರತವನ್ನು ಜೋಡಿಸಿ, ದೇಶವನ್ನು ದ್ವೇಷಿಸುವ ವ್ಯಕ್ತಿಗಳನ್ನು ಭೇಟಿಯಾಗುವ ಮೂಲಕ ನಾಡು ಒಡೆಯುವ ಕೆಲಸ ಬೇಡ ಎಂದು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಗೆ ಟಾಂಗ್ ನೀಡಿದರು.
ಭಾರತ್ ಜೋಡೋ ಆರಂಭಿಸುವಾಗ ಭಾರತವನ್ನು ದ್ವೇಷಿಸುವ ಪಾದ್ರಿಯನ್ನು ಭೇಟಿಯಾಗಿರುವ ರಾಹುಲ್ ಗಾಂಧಿಯವರು ಭಾರತವನ್ನು ಜೋಡಿಸಲು ಬಂದಿದ್ದಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗಿದೆ ಎಂದು ಹೇಳಿದರು.
ಆದರೂ ಕೂಡ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಪ್ರವೇಶಿಸುವಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿಯವರಿಗೆ ಸ್ವಾಗತ ಕೋರುತ್ತೇನೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರು ತಮ್ಮ ಯಾತ್ರೆಯನ್ನು ಕನ್ಯಾಕುಮಾರಿಯಲ್ಲಿ ಆರಂಭ ಮಾಡುವ ಸಂದರ್ಭದಲ್ಲಿ ಜಾರ್ಜ್ ಪೊನ್ನಯ್ಯ ಎಂಬ ಪಾದ್ರಿಯನ್ನು ಭೇಟಿಯಾದರು. ಆತ ಈ ದೇಶವನ್ನು ದ್ವೇಷಿಸುವ ಓರ್ವ ಕ್ರೈಸ್ತ ಮತ ಪ್ರಚಾರಕ. ಅವನನ್ನು ಭೇಟಿಯಾಗಿ ಜೀಸಸ್ ಕ್ರೈಸ್ಟ್ ಬಿಟ್ಟರೆ ಇನ್ಯಾರು ದೇವರೇ ಇಲ್ಲ. ಜೀಸಸ್ ಕ್ರೈಸ್ಟ್ ಮಾತ್ರ ನಿಜವಾದ ದೇವರು ಅಂತ ಅವನ ಬಾಯಲ್ಲಿ ಬರುವಂತೆ ಮಾಡಿದಿರಿ ಎಂದು ಕಿಡಿಕಾರಿದರು.
ನೀವು ಭಾರತ್ ಜೋಡೋ ಯಾತ್ರೆ ಮಾಡಿದ್ದೀರಿ, ಇಲ್ಲೇ ನಿಮ್ಮ ಉದ್ದೇಶ, ನಿಮ್ಮ ಗುರಿ ಬಹಳ ಸ್ಪಷ್ಟವಾಗುತ್ತದೆ. ನೀವೇನೂ ಜೋಡಿಸಲು ಬಂದಿದ್ದಲ್ಲ ಅಂತ ಗೊತ್ತು ಎಂದರು.
ಇಲ್ಲಾದರೂ ಚರ್ಚಿಗೋ ಇನ್ನೆಲ್ಲಾದರೂ ಹೋಗುವ ಬದಲು ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿ ನಮಸ್ಕಾರ ಮಾಡಿ ಬನ್ನಿ ಎಂದು ಸಲಹೆ ನೀಡಿದರು.
ಕರ್ನಾಟಕದ ಜಿಲ್ಲೆಗಳಿಗೆ ಭೇಟಿ ನೀಡಿ ಅಭಿವೃದ್ಧಿಯನ್ನು ಜೋಡಿಸುವುದು ಯಾವ ರೀತಿ ಅಂತ ಗೊತ್ತಾಗುತ್ತದೆ.
ಜೋಡಿಸುವುದು ಎಂದರೆ ಆರೋಗ್ಯ ಸೇವೆ ನೀಡುವ ಮೂಲಕ, ಕೃಷಿಭೂಮಿಗೆ ನೀರು ಕೊಡುವುದರ ಮೂಲಕ ಜೋಡಿಸಬೇಕು. ಆ ಕೆಲಸವನ್ನು ಭಾರತೀಯ ಜನತಾಪಕ್ಷ ಮಾಡಿಕೊಂಡು ಬಂದಿದೆ ಎಂದು ಸಂಸದರು ಹೇಳಿದರು.
ಇನ್ನೈದು ವರ್ಷದ ನಂತರ ಮತ್ತೊಂದು ಯಾತ್ರೆ ನಡೆಸಿ, ಆಗ ನೀವು ಬಸ್ಸಲ್ಲಿ ಬರುವ ಅಗತ್ಯವಿಲ್ಲ. ನೇರವಾಗಿ ದೆಹಲಿಯಿಂದ ಮೈಸೂರು ಏರ್ ಪೋರ್ಟ್ ಗೆ ಜೆಟ್ ನಲ್ಲಿ ಬಂದು ಇಳಿಯಬಹುದು
ಇಲ್ಲ ಇಟಲಿಯಿಂದಲೂ ನೀವು ಜೆಟ್ ಲ್ಲಿ ಬಂದು ಇಳಿಯಬಹುದು. ಅಲ್ಲಿಂದ ನೀವು ಸೂಪರ್ ಬೈಕಿನಲ್ಲಿ ಕೂಡ ಯಾತ್ರೆ ಹೊರಡಿಸಬಹುದು ಅಂತಹ ರಸ್ತೆಯನ್ನು ವಿಮಾನ ನಿಲ್ದಾಣದಲ್ಲಿ ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮೈಸೂರನ್ನು ಪ್ರವೇಶಿಸಿದಾಗ ಪಾದ್ರಿಯನ್ನು ಬದಿಗಿಟ್ಟು ತಾಯಿ ಚಾಮುಂಡೇಶ್ವರಿಗೊಂದು ಕೈಮುಗಿದು ಹೋಗಿ. ಇನ್ನಾದರೂ ಜೋಡಿಸುವಂತಹ ಸದ್ಬುದ್ಧಿ ತಾಯಿ ಕೊಡಲಿ.
ದೇಶ ಒಡೆಯುವವರನ್ನು ಭೇಟಿಯಾಗುವಂತಹ ಮನಸ್ಥಿತಿಯನ್ನು ದೂರ ಮಾಡಲಿ ಎಂದು ತಾಯಿಯನ್ನು ಬೇಡಿಕೊಂಡು ದಸರಾದಲ್ಲಿ ಭಾಗಿಯಾಗಿ ಎಂದು ಕೇಳಿಕೊಳ್ಳುತ್ತೇನೆ ಎಂದರು.
ಮೈಸೂರಿನಿಂದ ಆಚೆ ಹೋಗಬೇಕಾದರೆ ಹತ್ತು ಪಥದ ಹೆದ್ದಾರಿಯನ್ನು ಬೆಂಗಳೂರು ಮೈಸೂರು ನಡುವೆ ಮಾಡುತ್ತಿದ್ದೇವೆ.
ಯಾವ ರೀತಿ ಈ ದೇಶವನ್ನು ಜೋಡಿಸಬಹುದು ಎಂದು ವಾಜಪೇಯಿಯವರು ಸುವರ್ಣಪಥದ ಹೆದ್ದಾರಿ ಮೂಲಕ ತೋರಿಸಿಕೊಟ್ಟಿದ್ದರು ಎಂಬುದನ್ನು ಅರಿಯಿರಿ ಎಂದು ಪ್ರತಾಪ್ ಸಿಂಹ ರಾಹುಲ್ ಯಾತ್ರೆಗೆ ತಿರುಗೇಟು ನೀಡಿದರು.

