ಬೆಂಗಳೂರು: ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗವು 20,000 ಹುದ್ದೆಗಳ ಆಯ್ಕೆಗೆ ಕನ್ನಡದಲ್ಲೂ ಪರೀಕ್ಷೆ ನಡೆಸಬೇಕು ಹಾಗೂ ಕರ್ನಾಟಕದ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಬದಲಾವಣೆ ನಂತರವೇ ಸಿಬ್ಬಂದಿ ಆಯ್ಕೆ ಆಯೋಗ ಪರೀಕ್ಷೆ ನಡೆಸಬೇಕು ಎಂದು ಟ್ವೀಟ್ ಮಾಡಿ ಕುಮಾರಸ್ವಾಮಿ ಒತ್ತಯಿಸಿದ್ದಾರೆ.
ಕನ್ನಡದಲ್ಲೇ ಪರಿಕ್ಷೆ ನಡೆಸಿದರೆ ಕರ್ನಾಟಕದ ಅನೇಕ ಪ್ರತಿಭಾವಂತ ಯುವಜನರು ಆಯ್ಕೆ ಆಗಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕದ ಹುದ್ದೆಗಳಿಗೆ ಕನ್ನಡಿಗರ ನೇಮಕವಾದರೆ, ಕರ್ನಾಟಕದ ಜನರಿಗೆ ಕನ್ನಡದಲ್ಲಿ ಸೇವೆ ದೊರೆಯುತ್ತದೆ. ತಪ್ಪಿದರೆ, ಕೇಂದ್ರವು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಕೇಂದ್ರದ ಸಿಬ್ಬಂದಿ ಆಯ್ಕೆ ಆಯೋಗ 20,000 ಹುದ್ದೆಗಳ ಆಯ್ಕೆಗೆ ಹಿಂದಿ, ಇಂಗ್ಲೀಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಸುತ್ತಿದೆ. ಆಯ್ಕೆಯಾದ ಅಭ್ಯರ್ಥಿಯನ್ನು ಯಾವ ರಾಜ್ಯಕ್ಕಾದರೂ ಕಳುಹಿಸಬಹುದು.
ಕನ್ನಡ ಸೇರಿ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆಗೆ ಅವಕಾಶವಿಲ್ಲ. ಹಿಂದಿ ಹೇರಿಕೆ, ಭಾಷಾ ತಾರತಮ್ಯಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಎಚ್.ಡಿ.ಕೆ.ಪ್ರಶ್ನಿಸಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಪ್ರಾದೇಶಿಕ ಭಾಷೆಗಳನ್ನು ಹತ್ತಿಕ್ಕಲೇಬೇಕು ಎಂಬ ಕೆಟ್ಟ ಹಠವಿದ್ದಂತೆ ಕಾಣುತ್ತಿದೆ.
ಕನ್ನಡವೂ ಸೇರಿ ದಕ್ಷಿಣದ ಪ್ರಾದೇಶಿಕ ಭಾಷೆಗಳ ಬಗ್ಗೆ ಇನ್ನಿಲ್ಲದ ಅಸಹನೆ, ದ್ವೇಷ ಮೈಗೂಡಿಸಿಕೊಂಡಿದೆ ಎನಿಸುತ್ತಿದೆ. ತ್ರಿಭಾಷಾ ಸೂತ್ರಕ್ಕೆ ಹೇಗಾದರೂ ಸಮಾಧಿ ಕಟ್ಟಲೇಬೇಕೆಂದು ಹೊರಟಂತಿದೆ ಎಂದು ಅವರು ಕಿಡಿಕಾರಿದ್ದಾರೆ.

