ಡಿ. 15ರ ವೇಳೆಗೆ ರಾಜ್ಯದಲ್ಲಿ 438 ನಮ್ಮ ಕ್ಲಿನಿಕ್ ಕಾರ್ಯಾರಂಭ -ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ 438 ನಮ್ಮ ಕ್ಲಿನಿಕ್‌ ಗಳನ್ನು ನವೆಂಬರ್‌ ಅಂತ್ಯ ಅಥವಾ ಡಿಸೆಂಬರ್‌ 15 ರ ವೇಳೆಗೆ ಕಾರ್ಯಾರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ 243 ಕ್ಲಿನಿಕ್‌ಗಳು ಆರಂಭವಾಗಲಿವೆ ಎಂದು ಹೇಳಿದರು.
ಒಂದು ಕ್ಲಿನಿಕ್‌ನಲ್ಲಿ ವೈದ್ಯ ನರ್ಸಿಂಗ್‌ ಸಿಬ್ಬಂದಿ, ಲ್ಯಾಬ್‌ ಟೆಕ್ನೀಶಿಯನ್‌ ಹುದ್ದೆಗಳಿರುತ್ತವೆ. ಬಿಬಿಎಂಪಿ ವ್ಯಾಪ್ತಿಯ ಕ್ಲಿನಿಕ್‌ಗಳಿಗೆ ವೈದ್ಯರ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು, 160 ವೈದ್ಯರು ಈಗಾಗಲೇ ನೇಮಕ ಆಗಿದ್ದಾರೆ ಎಂದು ಹೇಳಿದರು.
ಉಳಿದ ಎಲ್ಲಾ ಸಿಬ್ಬಂದಿ ಹುದ್ದೆ ತುಂಬಿದೆ. ಬಾಕಿ ಉಳಿದ 83 ಕ್ಕೆ ಮತ್ತೆ ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಹತ್ತು ದಿನಗಳೊಳಗೆ ಇದು ಕೂಡ ಆಗಲಿದೆ ಎಂದು ತಿಳಿಸಿದರು.
ಬಡತನ ರೇಖೆಗಿಂತ ಕೆಳಗಿರುವ ಜನರು, ಗುಡಿಸಲುಗಳಲ್ಲಿ ವಾಸಿಸುವ ಕಡು ಬಡವರಿಗಾಗಿ ಈ ಯೋಜನೆ ರೂಪಿಸಲಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದಂತೆಯೇ ಇವು ಕಾರ್ಯ ನಿರ್ವಹಿಸಲಿದೆ. ಪ್ರತಿ ವಾರ್ಡ್‌ನಲ್ಲಿ ಒಂದು ಕ್ಲಿನಿಕ್‌ ಆರಂಭವಾಗುವುದರಿಂದ ಜನರಿಗೆ ಆರೋಗ್ಯ ಹಾಗೂ ಸರ್ಕಾರಿ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಅರಿವು ಹೆಚ್ಚಲಿದೆ ಎಂದು ಅಭಿಪ್ರಾಯ ಪಟ್ಟರು.
ಮಾರ್ಗಸೂಚಿಯ ಪ್ರಕಾರ, ಗ್ರಾಮೀಣ ಪ್ರದೇಶಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ.
ಆದರೆ ನಗರ ಪ್ರದೇಶಗಳಲ್ಲಿ ಇದು ಕಡಿಮೆ ಇದೆ. ಆದ್ದರಿಂದಲೇ ಈ ಯೋಜನೆ ರೂಪಿಸಿದ್ದು, ರಾಜ್ಯ ‌ಹಾಗೂ ಕೇಂದ್ರ ಸರ್ಕಾರ ಸಂಪೂರ್ಣ ಆರ್ಥಿಕ ಸಹಕಾರ ನೀಡಿದೆ ಎಂದರು.
ಹೆಚ್ಚು ಜನರು ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆಯ ಸೇವೆ ಪಡೆಯಬೇಕು ಎಂದು ಸುಧಾಕರ್ ಮನವಿ ಮಾಡಿದರು.
ಸರ್ಕಾರಿ ಕಟ್ಟಡಗಳಲ್ಲಿ, ಬಾಡಿಗೆ ಕಟ್ಟಡಗಳಲ್ಲಿ 1,000-1,200 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಕ್ಲಿನಿಕ್‌ ರೂಪಿಸಲಾಗುತ್ತಿದೆ. ಪ್ರತಿ ವರ್ಷ ಸಿಬ್ಬಂದಿಗಾಗಿ 138 ಕೋಟಿ ರೂ. ವೆಚ್ಚವಾಗಲಿದೆ. 
ಯೋಗ, ಪ್ರಾಣಾಯಾಮ, ಧ್ಯಾನ, ಆಹಾರ ಪದ್ಧತಿ ಮೊದಲಾದವುಗಳ ಕುರಿತು ಕ್ಲಿನಿಕ್‌ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.