ಜೆಡಿಎಸ್ ಅಧಿಕಾರಕ್ಕೆ ಬರುವುದು ಸತ್ಯ; ಕುಮಾರಸ್ವಾಮಿ ಸಿಎಂ ಆಗುವುದು ನಿಶ್ಚಿತ: ಭವಿಷ್ಯ ನುಡಿದ ದೇವೇಗೌಡರು

ಬೆಂಗಳೂರು: ನನ್ನ ಕಣ್ಣ ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರುವುದು ಸತ್ಯ, ಕುಮಾರಸ್ವಾಮಿ ಮತ್ತೆ ಸಿಎಂ ಆಗೇ ಆಗುತ್ತಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು
ಇದು ನಡೆದೇ ನಡೆಯುತ್ತದೆ, ಯಾರಿಗೂ ಸಂಶಯ ಬೇಡ ಎಂದು ಗೌಡರು ಭವಿಷ್ಯ ನುಡಿದರು.
ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಜೆಡಿಎಸ್‍ ಹಮ್ಮಿಕೊಂಡಿದ್ದ ಜನತಾ ಮಿತ್ರ ಸಮಾರೋಪ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನನಗೆ ಇನ್ನೂ ಹೋರಾಟ ಮಾಡುವ ಶಕ್ತಿ ಇದೆ. ಕೊನೆಯವರೆಗೂ ರಾಜ್ಯದ ನೆಲ, ಜಲದ ವಿಷಯದಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಹೇಳಿದರು. 
ರಾಜ್ಯದಲ್ಲಿ ಪಕ್ಷ ಉಳಿಯುವುದರ ಜತೆಗೆ ಬೆಳೆಯಲಿದೆ.ಯಾರು ಏನೂ ಮಾಡಲಾರರು,
ಪಕ್ಷವನ್ನು ಉಳಿಸಿ, ಬೆಳೆಸುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು. 
ಕುಮಾರಸ್ವಾಮಿ ಅವರು ಪಕ್ಷವನ್ನು ಉಳಿಸಲು ಹತ್ತು ವರ್ಷಗಳಿಂದ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಅದರ ಶ್ರಮ ಏನೆಂಬುದು ನನಗೆ ಗೊತ್ತು ಎಂದರು. 
ನನ್ನ ಆರೋಗ್ಯ ಇನ್ನೂ ಸ್ವಲ್ಪ ಸುದಾರಿಸಬೇಕು. ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡುತ್ತೇನೆ. ಇದೇ ತಿಂಗಳು 18ರಂದು ಪಕ್ಷದ ಕಾರ್ಯಕಾರಿ ಸಭೆ ಇದ್ದು, ಅದರಲ್ಲಿ ಭಾಗಿಯಾಗುತ್ತೇನೆ ಎಂದು ಗೌಡರು ಹೇಳಿದರು.
ಯಾವುದೇ ಒಂದು ಸಮಾಜಕ್ಕೆ ನೋವಾಗಲು ಬಿಡುವುದಿಲ್ಲ. ಅಲ್ಲದೇ, ಮಾತುಕೊಟ್ಟ ಮೇಲೆ ಅದನ್ನು ಕಾರ್ಯಗತ ಮಾಡಲೇಬೇಕು. ಅದಕ್ಕೆ ನಾವು ಬದ್ಧವಾಗಿರುತ್ತೇವೆ ಎಂದು ಭರವಸೆ ನೀಡಿದರು. 
ಮುಸ್ಲಿಮರಿಗೆ ಮೀಸಲಾತಿ ನೀಡುತ್ತೇವೆ ಎಂದು ಹೇಳಿರಲಿಲ್ಲ. ಆದರೂ ನಮ್ಮ ಸರ್ಕಾರ ಅದನ್ನು ಮಾಡಿದೆ. 
ಮುಸ್ಲಿಂ ಸಮುದಾಯಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದು, ರೆಸಿಡೆನ್ಸಿ ಶಾಲೆಗಳನ್ನು ನೀಡಿದವರು ಯಾರು ಎಂಬುದನ್ನು ಎಲ್ಲರೂ ನೆನಪಿಸಿಕೊಳ್ಳಬೇಕು. ಐದು ರೆಸಿಡೆನ್ಸಿ ಶಾಲೆಗಳನ್ನು ನೀಡುವ ತೀರ್ಮಾನ ಮಾಡಿದ್ದು ನಾನು ಎಂದು ತಿಳಿಸಿದರು.
ರಾಜಕಾರಣದಲ್ಲಿ ಪ್ರತಿ ಹಂತದಲ್ಲಿಯೂ ಹೋರಾಟ ಮಾಡಿದ್ದೇನೆ. ಮುಖ್ಯಮಂತ್ರಿ ಆಗಬೇಕಾದರೂ ಹೋರಾಟ ಮಾಡಬೇಕಾಯಿತು ಎಂದು ಹಿಂದಿನದನ್ನು ಮೆಲುಕು ಹಾಕಿದರು.
ನಾನು ಇನ್ನೂ ಇದ್ದೇನೆಂದು ತೋರಿಸಲು ಇಲ್ಲಿ ಕರೆದುಕೊಂಡು ಬಂದಿದ್ದಾರೆ ಎಂಬ ಭಾವನೆ ಬೇಡ. ಇನ್ನೂ ಹೋರಾಟ ಮಾಡುವೆ. ನಾವು, ನೀವೆಲ್ಲರೂ ಸೇರಿ ಈ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ದೇವೇಗೌಡರು ಕರೆ ನೀಡಿದರು.