ಅರಸೀಕೆರ : ಟೆಂಪೋ ಟ್ರಾವೆಲರ್ ಹಾಗೂ ಹಾಲಿನ ಲಾರಿ ಮತ್ತು ಸಾರಿಗೆ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂಭತ್ತು ಮಂದಿ ದಾರುಣವಾಗಿ ಸಾವನ್ನಪ್ಪಿರು ವಘಟನೆ ಅರಸೀಕೆರೆ ತಾಲ್ಲೂಕಿನ ಗಾಂಧಿನಗರ ಸಮೀಪ ನಡೆದಿದೆ.
ಅಪಘಾತದಲ್ಲಿ ಹನ್ನೆರಡು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ತಾಲ್ಲೂಕಿನ ಗಾಂಧಿನಗರ ಸಮೀಪ ರಾಷ್ಟ್ರೀಯ ಹೆದ್ದಾರಿ 206 ಟಿ.ಎಚ್ ರಸ್ತೆಯಲ್ಲಿ ಈ ಸರಣಿ ಅಪಘಾತ ಸಂಭವಿಸಿದ್ದು ವಿಷಯ ತಿಳಿದ ಕೂಡಲೇ ಸ್ಥಳೀಯ ಪೊಲೀಸರು ಸಾರ್ವಜನಿಕರು ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು.
ಹಳ್ಳಿಕೆರೆ ಗ್ರಾಮದ ಹದಿನಾಲ್ಕು ಮಂದಿ ಟಿಟಿ ವಾಹನದಲ್ಲಿ ಧರ್ಮಸ್ಥಳಕ್ಕೆ ತೆರಳಿ, ಅಲ್ಲಿಂದ ಹಾಸನಕ್ಕೆ ಆಗಮಿಸಿ ಹಾಸನಾಂಬೆ ದೇವಿ ದರ್ಶನ ಪಡೆದು ಗ್ರಾಮಕ್ಕೆ ಮರಳುತ್ತಿದ್ದರು.
ಇನ್ನೇನು ತಮ್ಮ ಊರಿಗೆ ತಲುಪಲು ಎರಡರಿಂದ ಮೂರು ಕಿಲೋಮೀಟರ್ ಇರುವಾಗಲೇ ಅಪಘಾತ ಸಂಭವಿಸಿದೆ.
ಹಳ್ಳಿಕೆರೆ ಗ್ರಾಮದ ಹದಿನಾಲ್ಕು ಮಂದಿ ಟಿಂಪೋ ಟ್ರಾವೆಲರ್ ವಾಹನದಲ್ಲಿ ನಿನ್ನೆ ಧರ್ಮಸ್ಥಳಕ್ಕೆ ತೆರಳಿದ್ದರು. ಮಕ್ಕಳು ಸೇರಿದಂತೆ ಪುರುಷರು ಮುಡಿ ನೀಡಿ ಶ್ರೀ ಮಂಜುನಾಥನ ಸ್ವಾಮಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು.
ನಂತರ ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯಕ್ಕೆ ಆಗಮಿಸಿ ದೇವಿ ದರ್ಶನ ಪಡೆದು ಎಲ್ಲರೂ ಹಳ್ಳಿಕೆರೆ ಗ್ರಾಮಕ್ಕೆ ತೆರಳುತ್ತಿದ್ದರು.
ಈ ನತದೃಷ್ಟರು ಅಂದುಕೊಂಡಂತೆ ಎಲ್ಲವೂ ಆಗಿದ್ದರೆ ಕೇವಲ ಐದು ನಿಮಿಷದಲ್ಲಿ ಮನೆ ಸೇರಿಕೊಳ್ಳತ್ತಿದ್ದರು.ಆದರೆ ವಿಧಿಯ ಲೆಕ್ಕಾಚಾರ ಬೇರೆಯೇ ಆಗಿತ್ತು.
ಅರಸೀಕೆರೆ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 206 ರ ಕಾಮಗಾರಿ ನಡೆಯುತ್ತಿದ್ದು, ಟಿಟಿ ವಾಹನದ ಹಿಂದೆ ಸಾರಿಗೆ ಬಸ್ ಬರುತ್ತಿತ್ತು.
ಶಿವಮೊಗ್ಗ ಕಡೆಯಿಂದ ಅರಸೀಕೆರೆ ಕಡೆಗೆ ಬರುತ್ತಿದ್ದ ಹಾಲಿನ ಲಾರಿ ಚಾಲಕನಿಗೆ ತಿರುವು ಗೊತ್ತಾಗಿಲ್ಲ.ಅದೇ ವೇಳೆ ಎರಡು ವಾಹನಗಳು ಬರುತ್ತಿದ್ದ ಕಡೆಗೆ ಲಾರಿ ಏಕಮುಖವಾಗಿ ಬಂದಿದೆ.
ಈ ವೇಳೆ ವೇಗವಾಗಿದ್ದ ಟಿಟಿ ವಾಹನ ಹಾಲಿನ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಇದೇ ವಾಹನದ ಹಿಂದೆ ಬರುತ್ತಿದ್ದ ಸಾರಿಗೆ ಬಸ್ ಪಲ್ಟಿಯಾಗಿದ್ದ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಇದರಿಂದ ಲೀಲಾವತಿ (50), ಚೈತ್ರಾ (33), ಸಮರ್ಥ (10), ಡಿಂಪಿ (12), ತನ್ಮಯ್ (10), ದ್ರುವ (2), ವಂದನಾ (20), ದೊಡ್ಡಯ್ಯ (60), ಭಾರತಿ (50) ಸೇರಿ ಒಂಭತ್ತು ಮಂದಿ ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟಿದ್ದಾರೆ.
12 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಹತ್ತು ಮಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರು ನಗರದ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡಿಕ್ಕಿ ರಭಸಕ್ಕೆ ಟಿಟಿ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಕ್ರೇನ್ ಮೂಲಕ ಟಿಟಿ ವಾಹನವನ್ನು ತೆರುವುಗೊಳಿಸಲಾಯಿತು.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಡಿ ವೈ ಎಸ್ ಪಿ ಅಶೋಕ್, ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ರಾಘವೇಂದ್ರ ಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿದರು.
ಬಾಣವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

