ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿ: ಜಿಲ್ಲಾಧಿಕಾರಿಗಳಿಗೆ ಬೊಮ್ಮಾಯಿ ಸಲಹೆ

ಬೆಂಗಳೂರು: ಜಿಲ್ಲಾಧಿಕಾರಿಗಳು ಸಮಯೋಚಿತ ತೀರ್ಮಾನಗಳ ಮೂಲಕ ಜನರಿಗೆ ನೆರವಾಗಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಸಮಯಪ್ರಜ್ಞೆ, ಸ್ಥಿತ ಪ್ರಜ್ಞತೆಯಿಂದ ಕಾರ್ಯನಿರ್ವಹಿಸಬೇಕು ಕರೆ ನೀಡಿದರು.

ಒಬ್ಬ ಐಎಎಸ್ ಅಧಿಕಾರಿಗೆ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು ಅತ್ಯಂತ ಮಹತ್ವಪೂರ್ಣ ಅವಕಾಶ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ನೀವು ಯಾವ ರೀತಿ ಕೆಲಸ ಮಾಡಿ ಗುರುತು ಬಿಡುತ್ತೀರಿ ಎನ್ನುವುದು ಮುಖ್ಯ ಎಂದರು.

ಈಗ ಬಹಳಷ್ಟು ಅಧಿಕಾರಿಗಳು ಜಿಲ್ಲಾಧಿಕಾರಿ ಹುದ್ದೆಯ ಅಧಿಕಾರ ಭಾಗವನ್ನಷ್ಟೇ ನೋಡುತ್ತಾರೆ. ಹುದ್ದೆಯ ಜವಾಬ್ದಾರಿ ಮತ್ತು ಆಡಳಿತದ ಪರಿಣಾಮವನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ.

ಆದರೆ ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ. ಇದನ್ನು ಗಮನದಲ್ಲಿರಿಸಿಕೊಂಡು ಕಾರ್ಯ ನಿರ್ವಹಿಸಿ ಎಂದು ಹೇಳಿದರು.

ಯಾವುದೇ ಕೆಲಸ ಮಾಡಬಾರದು ಅಂದುಕೊಂಡರೆ, 101 ಕಾರಣ ದೊರೆಯುತ್ತದೆ. ಒಂದು ಒಳ್ಳೆಯ ಕೆಲಸ ಮಾಡಬೇಕೆಂದರೆ ಒಂದೇ ಕಾರಣ ಸಾಕು. ಆದ್ದರಿಂದ ಸಕಾಲಿಕ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಉತ್ತಮ ಆಡಳಿತ ನೀಡಬೇಕು. ಸಮಸ್ಯೆಗಳಿದ್ದರೆ, ಕೂಡಲೇ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆಯಿರಿ ಎಂದು ಸಿಎಂ ಹೇಳಿದರು.

ಆಯವ್ಯಯ ಅನುಷ್ಠಾನ ಕುರಿತಂತೆ ಸರ್ಕಾರಿ ಆದೇಶಗಳಾಗಿದೆ. ತಳಹಂತದಲ್ಲಿ ಅವುಗಳ ಅನುಷ್ಠಾನಕ್ಕೆ ಕ್ರಮಗಳನ್ನು ಕೈಗೊಂಡು, ವರ್ಷಾಂತ್ಯದಲ್ಲಿ ಗುರಿ ಸಾಧಿಸುವಂತೆ ಸೂಚಿಸಿದರು.

ಸಚಿವರಾದ ಆರ್. ಅಶೋಕ್, ಜೆ.ಸಿ. ಮಾಧುಸ್ವಾಮಿ, ವಿ. ಸುನಿಲ್ ಕುಮಾರ್, ಸಿ.ಸಿ. ಪಾಟೀಲ್, ವಿ.ಸೋಮಣ್ಣ, ಬಿ.ಶ್ರೀರಾಮುಲು, ಕೆ. ಗೋಪಾಲಯ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಹಾಗೂ ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.