ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕೆ ಚುನಾವಣೆ

ಬೆಂಗಳೂರು: ಗಾಂಧಿ ಕುಟುಂಬದ ಹೊರತಾಗಿ ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕೆ ಸೋಮವಾರ ಚುನಾವಣೆ ನಡೆಯಿತು.

ಕರ್ನಾಟಕದವರೇ ಆದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇರಳದ ಸಂಸದ ಶಶಿ ತರೂರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂಬ ನಿರ್ಧಾರದಕ್ಕೆ ಬಂದಿದ್ದರಿಂದ ಚುನಾವಣೆ ಸ್ವರೂಪವೇ ಬದಲಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪಕ್ಷದ ಸಾಂಸ್ಥಿಕ ಚುನಾವಣಾ ಪ್ರಾಧಿಕಾರ ರಚನೆಯಾಗಿ ಪ್ರಕ್ರಿಯೆಗಳನ್ನು ನಡೆದವು.

ಬ್ಲಾಕ್ ಕಾಂಗ್ರೆಸ್‍ನಿಂದ ತಲಾ ಒಬ್ಬರಂತೆ ಕೆಪಿಸಿಸಿ ಸದಸ್ಯರು ಚುನಾಯಿತರಾಗಿದ್ದು ಅವರು ಈ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ.

ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ಮಂದಿ ಮತದಾರರು ಇದ್ದು ಎಲ್ಲರೂ ಕೆಪಿಸಿಸಿ ಕಚೇರಿಗೆ ಬಂದು ಸೋಮವಾರ ಮತ ಚಲಾವಣೆ ಮಾಡಿದರು.

ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಐಕ್ಯತಾ ಯಾತ್ರೆ ನಡೆಯುತ್ತಿದ್ದು, ಒಂದಿಷ್ಟು ಮಂದಿ ಪ್ರತಿನಿಧಿಗಳು ಭಾರತ ಮತ್ತು ರಾಜ್ಯದ ಯಾತ್ರಿಗಳಾಗಿ ಭಾಗವಹಿಸಿದ್ದಾರೆ. ಅವರ ಮತದಾನಕ್ಕೆ ಅನುಕೂಲವಾಗುವಂತೆ  ಬಳ್ಳಾರಿಯಲ್ಲೇ ಮತಗಟ್ಟೆ ಸ್ಥಾಪಿಸಲಾಗಿದೆ.

ಉಳಿದಂತೆ ಎಲ್ಲರಿಗೂ ಪಕ್ಷದ ಕೇಂದ್ರ ಕಚೇರಿಯಲ್ಲಿ ಮತದಾನಕ್ಕೆ ಸೂಚನೆ ನೀಡಲಾಗಿತ್ತು.

ಚುನಾವಣೆ ಬಳಿಕ ಅ.19ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.

ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆ ಖಚಿತ ಎನ್ನಲಾಗಿದೆ. ಆದರೆ ರಹಸ್ಯ ಮತದಾನವಾಗಿರುವುದರಿಂದ ಫಲಿತಾಂಶ ಪ್ರಕಟಗೊಳ್ಳುವವರೆಗೂ ಸೋಲು ಗೆಲುವನ್ನು  ಊಹಿಸಲು ಸಾಧ್ಯವಿಲ್ಲ.

ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಸೇರಿದಂತೆ ಸದಸ್ಯರು ಮತದಾನ ಮಾಡಿದರು.