ಬೆಂಗಳೂರು: ಅತ್ಯಲ್ಪ ಕಾಲದಲ್ಲಿ ಕನ್ನಡಿಗರ ಹೃದಯ ಗೆದ್ದು ಅಷ್ಟೇ ಬೇಗ ಕಣ್ಮರೆಯಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಕನ್ನಡ ರಾಜ್ಯೋತ್ಸವ ದಿನದಂದು ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ನಾಡು-ನುಡಿ-ಭಾಷೆ-ಇತಿಹಾಸ-ಸಾಹಿತ್ಯ-ಚಿತ್ರರಂಗ- ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ ಮಹನೀಯರಿಗೆ ಮಾತ್ರ ಈ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಈವರೆಗೂ ರಾಷ್ಟ್ರಕವಿ ಕುವೆಂಪು, ವರನಟ ಡಾ.ರಾಜ್‍ಕುಮಾರ್ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಸುಮಾರು ಎರಡು ದಶಕಗಳ ನಂತರ ಪುನೀತ್ ರಾಜ್‍ಕುಮಾರ್ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಕಾರ್ಯಕ್ರಮದ ರೂಪುರೇಷೆಗಳು ಹಾಗೂ ಪೂರ್ವ ಸಿದ್ಧತೆ ಕುರಿತಂತೆ ಸಭೆ ನಡೆಸಿದ್ದಾರೆ.
ನವೆಂಬರ್ 1ರಂದು ವಿಧಾನಸೌಧ ಮುಂಭಾಗ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ಪುನೀತ್‍ರಾಜ್‍ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಡಾ.ರಾಜ್‍ಕುಮಾರ್ ಕುಟುಂಬದ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ ಡಾ.ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ.
2021ರ ಅ.29 ರಂದು ಬೆಳಗ್ಗೆ ಅಭಿಮಾನಿಗಳ ನೆಚ್ಚಿನ ಅಪ್ಪು ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ನಿಧನರಾದರು. ಆದರೆ ಈಗಲೂ ಕೂಡಾ ಇದನ್ನು ಅರಗಿಸಿಕೊಳ್ಳಲು ಕನ್ನಡಿರಿಗೆ ಆಗುತ್ತಿಲ್ಲ.
ಅಪ್ಪು ಫೋಟೊ ನೋಡಿದ ಕೂಡಲೇ ಛೇ ಹೀಗಾಗಬಾರದಿತ್ತು ಎಂಬ ಶಬ್ದ ತಾನಾಗಿಯೇ ಬಂದು ಕಣ್ಣಾಲಿ ತುಂಬುತ್ತದೆ.
ಅಪ್ಪುಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿಯಾಗಿದೆ.

