ಮೈಸೂರು: ಪುನೀತ್ ರಾಜಕುಮಾರ್ ರವರ ನೆನಪಿನಲ್ಲಿ ಮಕ್ಕಳಲ್ಲಿ ಪರಿಸರ ಕಾಳಜಿ, ವನ್ಯಜೀವಿಗಳು,ಅರಣ್ಯ ಪ್ರದೇಶಗಳ ಅರಿವು ಮೂಡಿಸಲು ಆಯೋಜಿಸಿರುವ ಗಂಧದಗುಡಿ ಚಿತ್ರಕಲಾ ಸ್ಪರ್ಧೆಯಲ್ಲಿ ಎಲ್ಲಾ ಶಾಲೆಯ ಮಕ್ಕಳು ಭಾಗವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಕರೆ ನೀಡಿದರು.
ಮೈಸೂರು ದಸರಾ ವಸ್ತುಪ್ರದರ್ಶನದ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಸ್ಪರ್ಧೆಯ ಪೋಸ್ಟರ್ ಹಾಗೂ ಪ್ರಚಾರ ಸಾಮಾಗ್ರಿಗಳನ್ನು ಬಿಡುಗಡೆಗೊಳಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ ಬಳಗದ ವತಿಯಿಂದ ಕನ್ನಡಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಮೊದಲನೇ ವರ್ಷದ ನೆನಪಿನಲ್ಲಿ ಗಂಧಧಗುಡಿ ಚಿತ್ರಕಲಾ ಸ್ಪರ್ಧೆಯನ್ನ ಅ. 30ರ ಬೆಳಗ್ಗೆ 10:30ರಿಂದ ಮಧ್ಯಾಹ್ನ 1 ಗಂಟೆವರೆಗೆ ಕಾಳಿಂಗರಾವ್ ಗಾನಮಂಟಪದಲ್ಲಿ ಏರ್ಪಡಿಸಲಾಗಿದೆ.
ಕನ್ನಡ ಚಿತ್ರರಂಗದ ನಟಸಾರ್ವಭೌಮ ವರನಟ ಡಾ.ರಾಜಕುಮಾರ್ ರವರ ಪ್ರತಿಯೊಂದು ಚಿತ್ರವೂ ಸಮಾಜಕ್ಕೆ ಸಂದೇಶ ನೀಡುತ್ತಿದ್ದವು.
ಕುಟುಂಬ ಪ್ರಧಾನವಾದ ಚಿತ್ರಗಳಾಗಿದ್ದವು ಅವರಂತಯೇ ಅವರ ಸುಪುತ್ರ ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ರವರ ನಟನೆಯ ಚಿತ್ರಗಳು ಸಹ ಸಮಾಜದಲ್ಲು ಜಾಗೃತಿ ಮೂಡಿಸುತ್ತಿದ್ದವು ಎಂದು ಹೇಳಿದರು.
ಮದ್ಯವ್ಯಸನ ಮುಕ್ತ ಸಮಾಜ, ಪರಿಸರ ಸಂರಕ್ಷಣೆಯ ಕಾಳಜಿ, ಸರಳತೆಯ ನಟ ಪುನೀತ್ ರವರು ಚಿಕ್ಕವಯಸ್ಸಿನಲ್ಲಿಯೆ ನಟಿಸಿ ರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆದುಕೊಂಡವರು.
ವಿದ್ಯಾರ್ಥಿಯ ಪಾತ್ರದಿಂದ ಹಿಡಿದು ಜಿಲ್ಲಾಧಿಕಾರಿ, ಸೈನಿಕ, ಆರಕ್ಷಕ ಅಧಿಕಾರಿ ಸೇರಿದಂತೆ ಹಲವು ಪಾತ್ರಗಳನ್ನು ಮಾಡಿದ್ದಾರೆ.
ಅಷ್ಟೆ ಅಲ್ಲ ಇಂದಿನ ಗಂಧದಗುಡಿ ಚಿತ್ರದಲ್ಲಿ ಅರಣ್ಯಸಂರಕ್ಷಣೆ, ಪರಿಸರ ಕಾಳಜಿಯನ್ನ ಯುವಪೀಳಿಗೆಗೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವನ್ಯಜೀವಿಗಳ ಪರಿಚಯದ ಬಗ್ಗೆ ಅವರು ಬೆಟ್ಟ-ಗುಡ್ಡ ಅರಣ್ಯ,ಸಮುದ್ರ ಜಾಗದಲ್ಲಿ ನಟಿಸಿದ್ದು ಮಹತ್ವವಾಗಿದೆ ಎಂದು ಹೇಳಿದರು.
ಅಕ್ಟೋಬರ್ 30ರಂದು ಭಾನುವಾರ ಗಂಧದಗುಡಿ ಚಿತ್ರಕಲಾಸ್ಪರ್ಧೆಯಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ಶಾಲಾಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಭಾನುವಾರ ರಜೆಯಿರುವುದರಿಂದ ಪೋಷಕರು ತಮ್ಮ ಮಕ್ಕಳನ್ನು ಈ ಚಿತ್ರಕಲಾಸ್ಪರ್ಧೆಗೆ ಕರೆದುಕೊಂಡು ಬರಬೇಕೆಂದು ಸಚಿವರು ಕರೆ ನೀಡಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ ಗೌಡ ಮಾತನಾಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನೆನಪಿನಲ್ಲಿ ಆಯೋಜಿಸಿರುವ ಗಂಧದಗುಡಿ ಚಿತ್ರಕಲಾ ಸ್ಪರ್ಧೆಗೆ ಮೈಸೂರು ಜಿಲ್ಲೆಯ ಎಲ್ಲಾ ಶಿಕ್ಷಣ ಮಂಡಳಿಯವರು ತಮ್ಮ ಮಕ್ಕಳನ್ನು ಕಳುಹಿಸಬಹುದು, ಪ್ರವೇಶ ಉಚಿತವಾಗಿದೆ ಎಂದು ತಿಳಿಸಿದರು.
ವಿವಿಧ ವಯೋಮಿತಿಯ ಆಸಕ್ತ ಸ್ಪರ್ಧಾಳುಗಳು ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಮೂಡ ನಿಕಟಪೂರ್ವ ಅಧ್ಯಕ್ಷ ಹೆಚ್.ವಿ ರಾಜೀವ್, ಬಿಜೆಪಿ ನಗರಾಧ್ಯಕ್ಷ ಟಿ.ಎಸ್. ಶ್ರೀವತ್ಸ, ಪ್ರಧಾನಕಾರ್ಯದರ್ಶಿ ಗಿರಿಧರ್, ಬಿಜೆಪಿ ವಕ್ತಾರ ಮೋಹನ್, ನಗರಪಾಲಿಕೆ ಸದಸ್ಯ ಜಗದೀಶ್, ಕಾರ್ಯ ನಿರ್ವಹಣಾಧಿಕಾರಿ ಕೆ.ರುದ್ರೇಶ್, ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಮಲ್ಲಿಕಾ, ದೇವರಾಜು , ಅಪ್ಪು ಅಭಿಮಾನಿಗಳ ಬಳಗದ ದರ್ಶನ್ ಯದುರಾಜ್, ಶಿವು, ಮುರಳಿ, ಸುಚೀಂದ್ರ, ಚಕ್ರಪಾಣಿ, ಲೋಹಿತ್, ನಾಗೇಂದ್ರ, ನವೀನ್ ವಿನಯ್, ರಾಕೇಶ್, ರಾಘವೇಂದ್ರ, ಯೋಗಿಶ್ ಮತ್ತಿತರರು ಹಾಜರಿದ್ದರು.

