ಇನ್ಸ್ ಪೆಕ್ಟರ್ ನಂದೀಶ್ ಸಾವು: ಉನ್ನತ ಮಟ್ಟದ ತನಿಖೆಗೆ ಎಚ್ ಡಿ ಕೆ ಆಗ್ರಹ

ಬೆಂಗಳೂರು: ಕೆ.ಆರ್.ಪುರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನಂದೀಶ್  ಸಾವಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ದುಃಖ ವ್ಯಕ್ತಪಡಿಸಿದ್ದಾರೆ
ನಂದೀಶ್ ಮಾನಸಿಕವಾಗಿ ನೊಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಅವರ ಸಾವಿಗೆ ಕಾರಣವಾದ ಅಂಶಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಉತ್ತರ ಭಾರತದ ಅಧಿಕಾರಿಗಳ ದರ್ಪದಿಂದ ಹಾಗೂ ಸರ್ಕಾರದಿಂದಲೇ ಆಗಿರುವ ಕಗ್ಗೊಲೆಯೇ ಹೊರತು ಬರೀ ಹೃದಯಾಘಾತ ಅಲ್ಲ‌ ಎಂದು ಹೇಳಿದರು.
ಈ ಸಾವಿಗೆ ಬಿಜೆಪಿ ಹೈಕಮಂಡ್ ಕೃಪಾಕಟಾಕ್ಷ ಇರುವ, ಉತ್ತರ ಭಾರತ ಮೂಲದ ಹಿರಿಯ ಅಧಿಕಾರಿಗಳ ಉದ್ದತಟನ, ಕಿರುಕುಳ, ಸರ್ಕಾರದ ನಡವಳಿಕೆ ಕಾರಣ ಎಂದು ದೂರಿದರು.
ಕಾಸಿಗಾಗಿ ಹುದ್ದೆ ಕೊಡುತ್ತಿರುವುದೇ ಕಾರಣ ಎಂದು  ನೇರ ಆರೋಪ ಮಾಡಿದರು.
ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿ ಹೀಗೆ ಆಗಿದೆ ಅಂತ ಅವರ ಧರ್ಮಪತ್ನಿ  ಹೇಳಿದ್ದಾರೆ. ಕೆಲಸ ಬೇಡ ಪತಿಯನ್ನು ತಂದುಕೊಡಿ ಎಂದು ಕಣ್ಣೀರು ಹಾಕಿದ್ದಾರೆ. ಇದಕ್ಕೆ ಸರಕಾರ ಉತ್ತರ ಕೊಡಬೇಕು ಎಂದು ಎಚ್ ಡಿ ಕೆ  ಆಗ್ರಹಿಸಿದರು.
ಕೆ.ಆರ್.ಪುರಂ ಭಾಗದಲ್ಲಿ ಯಾವುದೋ ಒಂದು ಪಬ್ ಇವರ ವ್ಯಾಪ್ತಿಯಲ್ಲಿ ಇತ್ತು. ಬೆಳಗಿನಜಾವದವರೆಗೆ ಅದು ತೆಗೆದಿತ್ತು, ಇದಕ್ಕೆ ಈ ಪೊಲೀಸ್ ಸಹಕಾರವಿತ್ತೆಂದು ನಂದೀಶ್ ಅವರನ್ನು ಸಸ್ಪೆಂಡ್ ಮಾಡಿದ್ದಾರಂತೆ. 
ಸರ್ಕಾರ ಮಧ್ಯರಾತ್ರಿ ಒಂದು ಗಂಟೆಯವರೆಗೆ ರೆಸ್ಟೋರೆಂಟ್ ತೆರೆಯುವ ಅವಕಾಶ ಕೊಟ್ಟಿದೆ. ಆ ಪಬ್ ಎಷ್ಟೊತ್ತು ತೆಗೆದಿತ್ತು, ಅಲ್ಲಿ ಯಾರಿದ್ದರು?  ರಾಜಕಾರಣಿ ಬೆಂಬಲಿಗರು ಎಷ್ಟು ಜನ ಅಲ್ಲಿ ಇದ್ದರು? 
ಪೊಲೀಸ್ ಅಧಿಕಾರಿಗಳು ಕೂಡ ಡಾನ್ಸ್ ಮಾಡಿದ್ದಾರೆ ಅಂತ ರಿಫೋರ್ಟ್ ಇದೆ. ಇದರ ಬಗ್ಗೆ ತನಿಖೆ ಮಾಡಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅನಧಿಕೃತವಾಗಿ ಕ್ಯಾಸಿನೋ, ಮಟ್ಕಾ ದಂಧೆ ಕೂಡ ನಡೆಯುತ್ತಿದೆ. ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.