ಬಿಜೆಪಿಯವರಿಗೆ ನನ್ನ ಕಂಡರೆ ಭಯ; ಅದಕ್ಕಾಗಿಯೇ ಟಾರ್ಗೆಟ್ ಮಾಡ್ತಾರೆ -ಸಿದ್ದರಾಮಯ್ಯ

ಮೈಸೂರು: ಬಿಜೆಪಿಯವರಿಗೆ ನನ್ನನ್ನು ಕಂಡರೆ ಭಯ,ಆದ್ದರಿಂದಲೇ ಎಲ್ಲಾ ಕಡೆ ನನ್ನನ್ನು ಟಾರ್ಗೇಟ್‌ ಮಾಡಿ ನನ್ನ ಇಮೇಜ್‌  ಕಡಿಮೆ ಮಾಡಲು ಯತ್ನಿತ್ತಿದ್ದಾರೆ ಇದಕ್ಕೆಲ್ಲ ನಾನು ಬೆದರುವವನಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿ ಸರ್ಕಾರ ಎರಡು ವರ್ಷ ಮೂರು ತಿಂಗಳು ಸುಮ್ಮನಿದ್ದಿದ್ದು ಏಕೆ ಎಂದು ಪ್ರಶ್ನಿಸಿದರು.

ವಾಲ್ಮೀಕಿ ಶ್ರೀಗಳು 257 ದಿನಗಳ ಕಾಲ ಧರಣಿ ಕೂರುವಂತೆ ಮಾಡಿದ್ದಾದರ ಯಾತಕ್ಕೆ,ಮೊದಲು ಸರ್ಕಾರಕ್ಕೆ ಇದೆಲ್ಲ ಗೊತ್ತಾಗಲಿಲ್ಲವೆ ಎಂದು ಕುಟುಕಿದರು.

ನಮ್ಮ ಪಕ್ಷದ ಎಸ್‌,ಸಿ ಹಾಗೂ ಎಸ್‌,ಟಿ ಶಾಸಕರು ಪ್ರತೀ ಬಾರಿ ಸದನ ಕರೆದಾಗ ಮೀಸಲಾತಿ ಹೆಚ್ಚಳದ ಪ್ರಸ್ತಾಪ ಮಾಡಿದ್ದಾರೆ, ಧರಣಿ ಕೂತಿದ್ದಾರೆ.

ಆಗ ಬಿಜೆಪಿಯ ಒಬ್ಬ ಶಾಸಕನಾದರೂ ಬೆಂಬಲ ನೀಡಿದ್ರಾ ಎಂದು ಪ್ರಶ್ನಿಸಿದರು.

ಶ್ರೀರಾಮುಲು ಅವರು ಚುನಾವಣೆಗೆ ಮೊದಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ನಾಗಮೋಹನ್‌ ದಾಸ್‌ ಅವರ ವರದಿ ಜಾರಿಗೆ ಕೊಡುತ್ತೇವೆ, ಇದನ್ನು ರಕ್ತದಲ್ಲಿ ಬರೆದುಕೊಡ್ತೀನಿ ಎಂದಿದ್ದರು.

24 ಗಂಟೆಯಲ್ಲಿ ಜಾರಿ ಮಾಡಿದ್ರಾ.ಇಲ್ಲಾ ಮಾಡಲಿಲ್ಲ ಎಂದು ಗರಂ ಆದರು ಸಿದ್ದು.

ನಮ್ಮಿಂದ ಒತ್ತಡ ಜಾಸ್ತಿಯಾದ ಮೇಲೆ ಮತ್ತು ವಾಲ್ಮೀಕಿ ಶ್ರೀಗಳು ಧರಣಿ ಕೂತಮೇಲೆ ಬೇರೆ ದಾರಿಯಿಲ್ಲದೆ ಸುಗ್ರೀವಾಜ್ಞೆ ಹೊರಡಿಸಿದ್ದಾರೆ.

ನಾನು ಹೇಳಿದ್ದು ಒಂದು ಕಾಯ್ದೆ ಮಾಡಬೇಕು ಎಂದು. ಎರಡು ದಿನಗಳ ವಿಶೇಷ ಅಧಿವೇಶನ ಕರೆದು, ಒಂದು ಕಾಯ್ದೆ ಮಾಡಿ.

ಹೇಗೂ ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಇರುವುದರಿಂದ ದೆಹಲಿಗೆ ಹೋಗಿ ಕೆಲ ದಿನ ಕೂತು ಅದನ್ನು ಸಂವಿಧಾನದ 9 ಶೆಡ್ಯೂಲ್‌ ಗೆ ಸೇರಿಸಬೇಕಿದೆ.ಹಾಗೆ ಇವರು ಮಾಡ್ತಾರಾ ಎಂದು ಹೇಳಿದರು.

ಇವರು 9ನೇ ಶೆಡ್ಯೂಲ್‌ ಬಗ್ಗೆ ಮಾತನಾಡುತ್ತಿದ್ದಾರೆ, ಇದಕ್ಕೆ ಸೇರಿಸದೇ ಹೋದರೆ ಸಂವಿಧಾನಾತ್ಮಕ ರಕ್ಷಣೆ ಸಿಗುವುದಿಲ್ಲ ಎಂದು ಸಿದ್ದು ತಿಳಿಸಿದರು.

ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಹಾಕಲು  ಪತ್ರಕರ್ತರಿಗೆ ಲಕ್ಷ ಲಕ್ಷ ಹಣದ ಉಡುಗೊರೆ ನೀಡಿದ್ದಾರೆ. ತಮ್ಮ ಕಚೇರಿಯ ಯಾರೋ ಒಬ್ಬರು ಇದನ್ನು ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ ಎಂದು ಇದೇ ವೇಳೆ ಸಿದ್ದು ಹೇಳಿದರು.

ಬೊಮ್ಮಾಯಿ ಅವರ ಗಮನಕ್ಕೆ ಬರದೆ ಈ ರೀತಿ ಯಾರೋ ಒಬ್ಬರು ಹಣ ಕೊಡೋಕೆ ಆಗುತ್ತಾ, ಇದನ್ನು ಪತ್ರಕರ್ತರು ವಾಪಾಸು ಕೊಟ್ಟಿದ್ದಾರೆ.

ಈ ರೀತಿ ಹಣ ಕೊಡುವ ಹಿಂದಿನ ಉದ್ದೇಶ ಏನು, ಸರ್ಕಾರದ ಮೇಲೆ ಯಾವುದೇ ಆರೋಪ ಮಾಡಬಾರದು, ಸರ್ಕಾರದ ವಿರುದ್ಧ ಏನು ಬರೆಯಬಾರದು, ಅವರ ಬಾಯಿ ಮುಚ್ಚಿಸಬೇಕು ಎಂದು ಕೊಟ್ಟಿರುವುದು ತಾನೆ.

ಈ ಹಣ ಯಾವುದು, ಎಲ್ಲಿಂದ ಬಂತು ಗೊತ್ತಾ ನಿಮಗೆ. ಇದು 40% ಕಮಿಷನ್‌ ಲಂಚ ಹೊಡೆದ ದುಡ್ಡು ಕಂಡ್ರೀ ಎಂದು ‌ಕುಹಕವಾಡಿದರು ಸಿದ್ದರಾಮಯ್ಯ.

ಈ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಆಗ್ರಹಿಸಿದರು.