ಮೊರ್ಬಿಯ ಸೇತುವೆ ಕುಸಿತ: ಮೃತರ ಸಂಖ್ಯೆ 132ಕ್ಕೆ ಏರಿಕೆ

ಅಹಮಾದಾಬಾದ್ : ಗುಜರಾತ್‍ನ ಮೊರ್ಬಿಯ ಸೇತುವೆ ಕುಸಿದು ಬಿದ್ದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 132ಕ್ಕೆ ಏರಿಕೆಯಾಗಿದೆ.

ಈವರೆಗೆ 177ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ.

ರಾಜ್‍ಕೋಟ್‍ನ ಬಿಜೆಪಿ ಸಂಸದ ಮೋಹನ್ ಭಾಯ್ ಕಲ್ಯಾಣಿ ಕುಂದರಿಯಾ ಅವರ ಕುಟುಂಬದ 12 ಸದಸ್ಯರು ಮೊರ್ಬಿ ಸೇತುವೆ ಕುಸಿತದಲ್ಲಿ ಮೃತಪಟ್ಟಿದ್ದಾರೆ.

ಎನ್‍ಡಿಆರ್‍ಎಫ್, ಸೇನೆ ಮತ್ತು ಸ್ಥಳೀಯ ಆಡಳಿತದ ಐದು ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

140 ಕ್ಕೂ ಅಧಿಕ ವರ್ಷಗಳ ಇತಿಹಾಸ ಇರುವ ಈ ತೂಗು ಸೇತುವೆ ಹಲವು ಅಚ್ಚರಿಗಳಿಗೆ ಕಾರಣವಾಗಿದೆ.

ಕೇಬಲ್‍ಗಳ ಸಹಾಯದಿಂದ ಬ್ರಿಟಿಷರು ನಿರ್ಮಿಸಿರುವ ಅತಿ ಉದ್ದದ ತೂಗು ಸೇತುವೆ ಇದಾಗಿದೆ.

ಭಾನುವಾರ ರಜೆ ದಿನವಾದ್ದರಿಂದ ಅಲ್ಲಿ ಜನ ದಟ್ಟನೆ ಇತ್ತು.  ನೂರು ಜನರ ಸಾಮರ್ಥ್ಯವುಳ್ಳ ಸೇತುವೆ ಮೇಲೆ ಐದು ನೂರಕ್ಕೂ ಅಧಿಕ ಮಂದಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕೇಬಲ್ ಕಟಾಗಿ ಧರೆಗೆ ಉರುಳಿದೆ.

ದುರಂತ ಸಂಭವಿಸುತ್ತಿದ್ದಂತೆಯೇ  ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.

ಬೇರೆ ಕಡೆಯಿಂದಲೂ ರಕ್ಷಣಾ ಪಡೆಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ.

ವಿವಿಧ ಆರೋಗ್ಯ ಕೇಂದ್ರಗಳು, ರಾಜ್‍ಕೋಟ್ ಪಿಡಿಯು ಆಸ್ಪತ್ರೆ ಮತ್ತು ಸುರೇಂದ್ರನಗರ ಸಿವಿಲ್ ಆಸ್ಪತ್ರೆಯ ಸುಮಾರು 40 ವೈದ್ಯರು ಗಾಯಾಳುಗಳಿಗೆ ಮೊರ್ಬಿ ಸಿವಿಲ್ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ.