ರೇಣುಕಾಚಾರ್ಯ ತಮ್ಮನ ಮಗನ ದೇಹ ಪತ್ತೆ; ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಕೊಲೆ ಶಂಕೆ

ದಾವಣಗೆರೆ: ಶಾಸಕ‌ ರೇಣುಕಾಚಾರ್ಯ‌‌ ಅವರ ತಮ್ಮನ ಮಗನ ಮೃತದೇಹ ಕಾಲುವೆಯಲ್ಲಿ ಪತ್ತೆಯಾಗಿದ್ದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
 
ಶನಿವಾರ ಮನೆಯಲ್ಲಿ ಹೊರಗೆ ಹೋಗುವುದಾಗಿ ಹೇಳಿಹೋಗಿದ್ದ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಗುರುವಾರ ಹೆಣವಾಗಿ ಪತ್ತೆಯಾಗಿದ್ದಾರೆ.
 
ನ್ಯಾಮತಿ-ಹೊನ್ನಾಳಿ ಮಧ್ಯೆ ಕಾಲುವೆಯಲ್ಲಿ ಅವರ  ಟ್ರೇಟಾ ಕಾರು‌ ಪತ್ತೆಯಾಗಿದ್ದು ಅದರಲ್ಲಿ ಚಂದ್ರಶೇಖರ್ ಅವರ ದೇಹವೂ ಇತ್ತೆಂದು ಪೊಲೀಸರು ತಿಳಿಸಿದ್ದಾರೆ.
 
ಕಾರಿನ ಹಿಂಬದಿ ಸೀಟ್ ನಲ್ಲಿ ದೇಹ ಪತ್ತೆಯಾಗಿದ್ದು ಚಂದ್ರಶೇಖರ್ ಸಾವಿನ ಬಗ್ಗೆ ಬಹಳಷ್ಟು ಶಂಕೆ‌ ವ್ಯಕ್ತವಾಗಿದೆ.
 
ತಮ್ಮನ ಮಗನ ಸಾವಿನ ಸುದ್ದಿ ರೇಣುಕಾಚಾರ್ಯ ಮತ್ತು ಅವರ ಕುಟುಂಬಕ್ಕೆ ಬರಸಿಡಿಲಿನಂತೆ ಬಂದೆರಗಿದೆ.
 
ರೇಣುಕಾಚಾರ್ಯ ಮಗನ ಶವವನ್ನು ತಬ್ಬಿಕೊಂಡು ದುಃಖಿಸುತ್ತಿದ್ದುದು ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿತು.
 
ಚಂದ್ರೂನೆ ಕಾರು ಚಲಾಯಿಸಿದ್ದರೆ ಅವನು ಹಿಂದಿನ ಸೀಟಿನಲ್ಲಿ ಮಲಗಿದ ಸ್ಥಿತಿಯಲ್ಲಿ ಇರಲು ಹೇಗೆ ಸಾಧ್ಯ,ಯಾರೋ ಕೊಲೆ ಮಾಡಿ ಕಾರನ್ನು ನಾಲೆಗೆ ತಳ್ಳಿರಬಹುದು ಎಂದು ರೇಣುಕಾಚಾರ್ಯ ಅನುಮಾನ ವ್ಯಕ್ತಪಡಿಸಿದ್ದಾರೆ.
 
ಮಾಧ್ಯಮದವರೇ ನಿಮಗೇ ಇದು ಮೇಲ್ನೋಟದಲ್ಲೇ ಕೊಲೆ‌ ಎನಿಸುವುದಿಲ್ಲವೆ‌ ನೀವೆ ಇದನ್ನು ಅವಲೋಕಿಸಿ ಎಂದು ರೇಣುಕಾಚಾರ್ಯ ಪರಿ,ಪರಿಯಾಗಿ ಅವಲತ್ತುಕೊಂಡರು.
 
ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಪ್ರಾರಂಭಿಸಿದ್ದಾರೆ.
 
ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು‌ ಪೋಸ್ಟ್ ಮಾರ್ಟಮ್ ರಿಪೋರ್ಟ್‌ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.