ಮೈಸೂರು: ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ವತಿಯಿಂದ ರಸ್ತೆ ಗುಂಡಿ ಮುಚ್ಚಿ, ಹದಗೆಟ್ಟ ರಸ್ತೆಗಳನ್ನು ಸರಿಪಡಿಸಬೇಕು ಎಂಬ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಯಿತು.
ಎಂಜಿ ರಸ್ತೆಯಲ್ಲಿರುವ ತರಕಾರಿ ಮಾರ್ಕೆಟ್ ಮುಂಭಾಗ ರಸ್ತೆಗುಂಡಿಗಳ ಬಳಿ ವಾಹನ ಸವಾರರಿಂದ ಸಹಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಲಾಯಿತು.
ಈ ಅಭಿಯಾನವು ಮೈಸೂರಿನಲ್ಲಿ ಎಲ್ಲೆಲ್ಲಿ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದೆಯೋ ಅಂತಹ ಸ್ಥಳದಲ್ಲಿ ವಾಹನ ಸವಾರರಿಂದ ಸಹಿ ಸಂಗ್ರಹಿಸಲಾಗುವುದು ಎಂದು ಈ ವೇಳೆ
ಘಟಕದ ಅಧ್ಯಕ್ಷ ರವಿಶಂಕರ್ ಹೇಳಿದರು.
ವಾಹನ ಸವಾರರಿಂದ ಪಡೆದ ಸಹಿಗಳನ್ನು ಮೈಸೂರು ಜಿಲ್ಲಾಧಿಕಾರಿಗಳಿಗೆ ಹಾಗೂ ಮಹಾಪೌರರಿಗೆ ನೀಡಿ ಶೀಘ್ರ ರಸ್ತೆ ದುರಸ್ತಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ದಸರೆ ಮುಗಿದರೂ ಮೈಸೂರಿನ ರಸ್ತೆ ಗುಂಡಿಗಳನ್ನು ಮುಚ್ಚಲಾಗದ ಮೈಸೂರು ಮಹಾನಗರ ಪಾಲಿಕೆ ಬಗ್ಗೆ ನಾಚಿಕೆ ಯಾಗುತ್ತದೆ ಎಂದು ಬೇಸರ ಪಟ್ಟರು.
ಮೇಯರ್ ಅವರು ಪ್ರಾರಂಭದ ಜೋಶ್ನಲ್ಲಿ ದಸರೆಯೊಳಗೆ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಲು ಸಮಾರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಘೋಷಣೆ ಏನೋ ಮಾಡಿದರು.
ಆದರೆ ಮೈಸೂರಿನ ಎಲ್ಲಾ ರಸ್ತೆ ಗಳ ಗುಂಡಿಗಳನ್ನು ಮುಚ್ಚದೆ ಪಾಲಿಕೆ ಅಧಿಕಾರಿಗಳು ಕಣ್ಣೊರೆಸುವ ತಂತ್ರ ಮಾಡಿದರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಗುಂಡಿಗಳನ್ನು ಮುಚ್ಚಲಾಗದ ಮಹಾನಗರ ಪಾಲಿಕೆ ಮಲಗಿದೆಯೇ, ಪಾಲಿಕೆ ಸದಸ್ಯರುಗಳಿಗೆ ಅವರ ಕ್ಷೇತ್ರದ ರಸ್ತೆ ಗುಂಡಿಗಳನ್ನು ಮುಚ್ಚಿಸಲು ಆಗುತ್ತಿಲ್ಲವೇ ಎಂದು ಪ್ರಶ್ನಿಸಿದರು.
ನಿಮ್ಮಿಂದ ರಸ್ತೆ ಗುಂಡಿ ಗಳನ್ನು ಮುಚ್ಚಿಸಲು ಸಾಧ್ಯವಾಗುತ್ತಿಲ್ಲವೆಂದಾದರೆ ಮುಂದಿನ ಚುನಾವಣೆಗೆ ಯಾವ ಮುಖ ಇಟ್ಟುಕೊಂಡು ಓಟು ಕೇಳುತ್ತೀರಿ.
ವಲಯ ಇಂಜಿನಿಯರ್ಗಳ ಕಣ್ಣಿಗೆ ಈ ಗುಂಡಿಗಳು ಕಾಣುತ್ತಿಲ್ಲವೆ, ಕಂಡರೂ ಇದು ನಿಮಗೆ ಲಾಭದಾಯಕವಲ್ಲವೆಂಬ ಧೋರಣೆಯೇ ಅಥವಾ ರಸ್ತೆ ಗುಂಡಿ ಮುಚ್ಚಲಾರದಷ್ಟು ಪಾಲಿಕೆ ದಿವಾಳಿ ಯಾಗಿದೆಯೇ ಎಂದು ರವಿಶಂಕರ್ ಕಿಡಿಕಾರಿದರು.
ಇದಕ್ಕೆಲ್ಲಾ ಮಹಾಪೌರರು ಮತ್ತು ಆಯುಕ್ತರೇ ಇದಕ್ಕೆ ಉತ್ತರಿಸಬೇಕು ಎಂದು. ಜನರು ಜೀವ ಕಳೆದುಕೊಳ್ಳುವ ಮುನ್ನ ರಸ್ತೆ ಗುಂಡಿಗಳನ್ನು ಮುಚ್ಚಿ ಮೈಸೂರು ಮಹಾನಗರ ಪಾಲಿಕೆ ಮಾನ ಕಾಪಾಡಿ ಎಂಬುದು ನಮ್ಮ ಕಳಕಳಿಯ ಮನವಿ ಎಂದು ಹೇಳಿದರು
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ,ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ ,ಚಕ್ರಪಾಣಿ ಹಾಗೂ ಆಟೋ ಚಾಲಕರು ಮತ್ತು ರಸ್ತೆ ಬದಿ ವ್ಯಾಪಾರಿಗಳು ಹಾಜರಿದ್ದರು.

