ಚಿತ್ರದುರ್ಗ: ಅಪ್ರಾಪ್ತೆಯರಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಬಂಧನದಲ್ಲರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಮಕ್ಕಳಿಗೆ ಹಣ್ಣಿನಲ್ಲಿ ಮತ್ತುಭರಿಸುವ ಔಷಧಿ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂಬ ಆಘಾತಕಾರಿ ಅಂಶ ಹೊರಬಿದ್ದಿದೆ.
ಚಿತ್ರದುರ್ಗದ 2ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
ನ್ಯಾಯಾಲಯಕ್ಕೆ ತನಿಖಾ ತಂಡದಿಂದ ಮುರುಘಾ ಶರಣರ ವಿರುದ್ಧ 374 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
ತನಿಖಾ ತಂಡದ ಮುಖ್ಯಾಧಿಕಾರಿ ಡಿವೈಎಸ್ಪಿ ಅನಿಲ್‍ಕುಮಾರ್ ನೇತೃತ್ವದ ತಂಡ ಚಿತ್ರದುರ್ಗದ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಬೆಚ್ಚಿಬೀಳಿಸುವ ಅಂಶಗಳು ಹೊರಬಿದ್ದಿವೆ.
ಈ ಪ್ರಕರಣದಲ್ಲಿ ಮುರುಘಾಶ್ರೀಗಳು ಮೊದಲನೇ ಆರೋಪಿ. 2ನೇ ಆರೋಪಿ ಹಾಸ್ಟೆಲ್‍ನ ವಾರ್ಡನ್ ರಶ್ಮಿ , 3ನೇ ಆರೋಪಿ ಮಠದ ಕಾರ್ಯದರ್ಶಿ ಪರಮಶಿವಯ್ಯ ಹಾಗೂ ಉತ್ತರಾಧಿಕಾರಿ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
ಆದರೆ ವಕೀಲ ಗಂಗಾಧರಯ್ಯ ಇದರಲ್ಲಿ ಭಾಗಿಯಾಗಿರುವುದರ ಬಗ್ಗೆ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖವಾಗಿಲ್ಲ.
ಕಳೆದ ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣವನ್ನು ಚಿತ್ರದುರ್ಗ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿತ್ತು.
ಸೆಪ್ಟೆಂಬರ್ 1ರಂದು ಮುರುಘಾ ಶರಣ ಬಂಧನವಾಗಿತ್ತು.
ಮಹಿಳಾ ವಾರ್ಡನ್ ರಶ್ಮಿ ಮೂಲಕ ಬಾಲಕಿಯರನ್ನು ಕರೆಸಿ ನಿರಂತರ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ಮುರುಘಾ ಶರಣ ವಿರುದ್ಧ ಆರೋಪವಿದೆ.
ಮತ್ತು ಭರಿಸುವ ಔಷಧಿ ಬೆರೆಸಿದ ಸೇಬು ನೀಡಿ ಮಕ್ಕಳನ್ನು ಕಚೇರಿ, ಬೆಡ್‍ರೂಂ, ಬಾತ್ ರೂಂಗೆ ಕರೆದೊಯ್ದು ಬಲತ್ಕಾರ ಮಾಡಲಾಗಿತ್ತೆಂದು ದೂರಿನಲ್ಲಿ ತಿಳಿಸಲಾಗಿದೆ.
ವಿರೋಧಿಸಿದರೆ ವಾರ್ಡನ್ ರಶ್ಮಿ ಜೀವ ಬೆದರಿಕೆ ಹಾಕುತ್ತಿದ್ದರು ಎಂದೂ ಕೂಡಾ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಮುರುಘಾಶ್ರೀಗಳ ವಿರುದ್ಧ ಹತ್ತಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಗಂಭೀರ ಆರೋಪಗಳು ಕೇಳಿಬಂದಿದೆ.
ಕೆಲ ವರ್ಷದ ಹಿಂದೆ ಒಬ್ಬ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು ಎಂಬ ಸಂತ್ರಸ್ತ ಬಾಲಕಿಯರ ಹೇಳಿಕೆ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಂಧ್ರಪ್ರದೇಶ ಮೂಲದ ಬಾಲಕಿ ಮಠದ ಹಾಸ್ಟೆಲ್‍ನಲ್ಲಿದ್ದಳು. ಆಂಧ್ರಕ್ಕೆ ತೆರಳಿದ್ದ ವೇಳೆ ಅಪಘಾತದಲ್ಲಿ ಸಾವನ್ನಪ್ಪಿದ್ದಾಳೆ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.
ಆದರೆ ಈ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.
ಆ ಬಾಲಕಿ ಯಾರು, ಅಪಘಾತ ಯಾವಾಗ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಸದ್ಯ ಮಠದ ಹಾಸ್ಟೆಲ್‍ನಲ್ಲಿದ್ದ ಮತ್ತಷ್ಟು ಮಕ್ಕಳ ವಿಚಾರಣೆ ನಡೆಸಲಾಗುತ್ತಿದೆ. ಸಂತ್ರಸ್ತರ ಹೇಳಿಕೆ ಅಧರಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ವೇಳೆ ಮತ್ತಷ್ಟು ಮಕ್ಕಳು ದೂರು ನೀಡಿದರೆ ಮುರುಘಾ ಶರಣರಿಗೆ ಕಂಟಕ ಎದುರಾಗುವುದು ಖಂಡಿತಾ.
ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ನೆರವಿನೊಂದಿಗೆ ಇಬ್ಬರು ಅಪ್ರಾಪ್ತ ಬಾಲಕಿಯರು ಮೈಸೂರಿನಲ್ಲಿ ದೂರು ದಾಖಲಿಸಿದ್ದರು.
ನಂತರ ಪೋಕ್ಸೊ ಕಾಯ್ದೆ ಮತ್ತು ಅತ್ಯಾಚಾರ ಆರೋಪದಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಸೆಪ್ಚೆಂಬರ್ 1 ರಂದು ಬಂಧಿಸಿದ್ದಾರೆ

