ಬೆಂಗಳೂರು: ಸಿದ್ದರಾಮಯ್ಯನವರೇ ನೀವು ಎಲ್ಲೇ ಸ್ಪರ್ಧಿಸಿದರೂ ಪರಮೇಶ್ವರ್, ಖರ್ಗೆ, ಡಿಕೆಶಿ ನಿಮಗೆ ಖೆಡ್ಡಾ ತೋಡುತ್ತಾರೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಚಾಟಿ ಬೀಸಿದ್ದಾರೆ.
ನಿಮ್ಮ ಪಕ್ಷ ಅಧಿಕಾರಕ್ಕೆ ಬರುವುದರ ಬಗ್ಗೆ ಚಿಂತಿಸುವುದನ್ನು ಬಿಡಿ, ಮೊದಲು ನಿಮಗಾಗಿ ಒಂದು ಕ್ಷೇತ್ರವನ್ನು ಅಂತಿಮಗೊಳಿಸುವ ಕಡೆ ಗಮನ ಕೊಡಿ ಎಂದು ಟ್ವೀಟ್ ಮಾಡಿ ಸಿಎಂ ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬರುವುದರ ಬಗ್ಗೆ ಸಿದ್ದರಾಮಯ್ಯನವರು ಕನಸು ಕಾಣುತ್ತಿದ್ದಾರೆ. ನೀವು ಎಲ್ಲೇ ಸ್ರ್ಪರ್ಧಿಸಿದರೂ ಪರಮೇಶ್ವರ್, ಖರ್ಗೆ, ಡಿಕೆಶಿ ನಿಮಗೆ ಖೆಡ್ಡಾ ತೋಡುವುದು ಖಚಿತ ಎಂದು ಎಚ್ಚರಿಸಿದ್ದಾರೆ.
ಕಾಂಗ್ರೆಸ್ಸಿನ ಎವರ್ ಗ್ರೀನ್ ಬಾಲಕ ರಾಹುಲ್ ಗಾಂಧಿ ರಾಜ್ಯ ನಾಯಕರನ್ನು ಒಗ್ಗೂಡಿಸಲು ಮಾಡಿದ ಎಲ್ಲಾ ಕಸರತ್ತುಗಳು ವಿಫಲವಾಗಿದೆ.
ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರಂತೆ ಸಿಎಂ ಹುದ್ದೆಗಾಗಿ ಕಚ್ಚಾಡುತ್ತಿಲ್ಲ ಎಂದು ಟೀಕಿಸಿದ್ದಾರೆ.
ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿಗರು ಜೊತೆಯಾಗಿ ಜನಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಯಾತ್ರೆಗೆ ರಾಜ್ಯಾದ್ಯಂತ ಸಿಗುತ್ತಿರುವ ಜನ ಬೆಂಬಲದಿಂದ ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದಾರೆ ಎಂದು ಕುಟುಕಿದ್ದಾರೆ.
ರಾಹುಲ್ ಗಾಂಧಿ ಅಷ್ಟೇ ಅಲ್ಲ ಯಾರಿಂದಲೂ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರನ್ನು ಜೋಡಿಸಲು ಸಾಧ್ಯವಿಲ್ಲ.
ಇವರಿಬ್ಬರು ಒಂದಾಗಬೇಕೆಂದರೆ ಮೊದಲು ಕುರ್ಚಿಯ ಆಸೆ ಬಿಡಬೇಕು. ಸಿದ್ದರಾಮಯ್ಯ ಅವರೇ ನಿಮ್ಮಿಂದ ಸಿಎಂ ಕುರ್ಚಿ ಆಸೆ ಬಿಡಲು ಸಾಧ್ಯವೇ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.

