ಹೊರಟಿತು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು: ಹಸಿರು ನಿಶಾನೆ ತೋರಿದ ಪ್ರಧಾನಿ

ಬೆಂಗಳೂರು: ಚೆನ್ನೈಬೆಂಗಳೂರುಮೈಸೂರು ನಡುವೆ ಸಂಚರಿಸಲಿರಿವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು.

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಮೋದಿ ಅವರು ಅಧಿಕೃತ ಚಾಲನೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಜೊತೆಯಲ್ಲಿದ್ದರು.

ಚೆನ್ನೈಬೆಂಗಳೂರುಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್ ಒಟ್ಟು 483 ಕಿ.ಮೀ. ದೂರವನ್ನು ಕ್ರಮಿಸಲಿದೆ. ವಂದೇ ಭಾರತ್ ರೈಲುಗಳು ಕವಚ ಎಂಬ ರೈಲು ಡಿಕ್ಕಿ ತಪ್ಪಿಸುವ ವ್ಯವಸ್ಥೆ (ಟಿಸಿಎಎಸ್) ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಯನ್ನು ಹೊಂದಿದೆ.

ಚೆನ್ನೈಬೆಂಗಳೂರುಮೈಸೂರು ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ, ಬೆಂಗಳೂರು ನಗರ ಜಂಕ್ಷನ್ನಲ್ಲಿ ಒಂದೇ ಒಂದು ನಿಲುಗಡೆ ಇರುತ್ತದೆ.

ರೈಲು, ಚೆನ್ನೈ ಸೆಂಟ್ರಲ್ನಿಂದ ಬೆಳಿಗ್ಗೆ 5.50ಕ್ಕೆ ಹೊರಡುತ್ತದೆ. ಬೆಂಗಳೂರು ನಗರ ಜಂಕ್ಷನ್ಗೆ 359 ಕಿ.ಮೀ.ಗಳನ್ನು ಕ್ರಮಿಸಿ ಬೆಳಿಗ್ಗೆ 10:25ಕ್ಕೆ ಆಗಮಿಸುತ್ತದೆ.

ಇಲ್ಲಿ ಐದು ನಿಮಿಷಗಳ ಕಾಲ ನಿಂತು, ಬೆಳಿಗ್ಗೆ 10.30 ಕ್ಕೆ ಮೈಸೂರಿಗೆ ಹೊರಡುತ್ತದೆ. ನಂತರ ಮೈಸೂರು ಜಂಕ್ಷನ್ಗೆ 137.6 ಕಿ.ಮೀ.ಗಳ ದೂರ ಕ್ರಮಿಸಿ ಮಧ್ಯಾಹ್ನ 12.30ಕ್ಕೆ ತಲುಪುತ್ತದೆ.

ವಾಪಸ್ ಪ್ರಯಾಣದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಮೈಸೂರು ಜಂಕ್ಷನ್ನಿಂದ ಮಧ್ಯಾಹ್ನ 1.05ಕ್ಕೆ ಹೊರಟು 2.55ಕ್ಕೆ ಬೆಂಗಳೂರು ತಲುಪುತ್ತದೆ.

ಐದು ನಿಮಿಷಗಳ ನಂತರ, ಅಂದರೆ 3:00 ಗಂಟೆಗೆ ಹೊರಟು, ಚೆನ್ನೈ ಸೆಂಟ್ರಲ್ ನಿಲ್ದಾಣವನ್ನು ರಾತ್ರಿ 7:35ಕ್ಕೆ ತಲುಪುತ್ತದೆ.

ಚೆನ್ನೈಬೆಂಗಳೂರುಮೈಸೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ವಾರದಲ್ಲಿ ಆರು ದಿನಗಳ ಕಾಲ ಅಂದರೆ ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಸಂಚರಿಸುತ್ತದೆ.

ರೈಲನ್ನು ಸಂಪೂರ್ಣವಾಗಿ ಭಾರತದ ಇಂಟಿಕ್ರೆಲ್ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಾಣ ಮಾಡಲಾಗಿದೆ.

ವಂದೇ ಭಾರತ್ ರೈಲಿನಲ್ಲಿ 16 ಬೋಗಿಗಳಿವೆ. ಸುಮಾರು 1200 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ ಅನುಭವ ಪಡೆಯುವುದು ರೈಲಿನ ವಿಶೇಷವಾಗಿದೆ.

ಚೆನ್ನೈನಲ್ಲಿ ವಂದೇ ಮಾತರಂ ರೈಲುಗಳು ಸಿದ್ಧಪಡಿಸಲಾಗುತ್ತಿದೆ.ಇದು ಸಂಪೂರ್ಣ ಸ್ವದೇಶಿ ರೈಲುಗಳಾಗಿದ್ದು, ಶೇ.80ರಷ್ಟು ಭಾರತದ ಕಚ್ಛಾ ವಸ್ತುಗಳನ್ನೇ ಬಳಸಲಾಗುತ್ತಿದೆ.

ಒಂದು ರೈಲಿಗೆ 135 ದಶಲಕ್ಷ ಡಾಲರ್ ವೆಚ್ಚವಾಗಲಿದ್ದು, 2023 ಮಾರ್ಚ್ ವೇಳೆಗೆ 27 ರೈಲುಗಳು ಸಂಚಾರಕ್ಕೆ ಸಿದ್ಧವಾಗಲಿದೆ.