ಮತ್ತೊಂದು ವಿವಾದ ಹುಟ್ಟುಹಾಕಿದ ಸತೀಶ್ ಜಾರಕಿಹೊಳಿ

ಮುಂಬೈ: ಹಿಂದೂ ಧರ್ಮದ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕೀಹೊಳಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಛತ್ರಪತಿ ಸಾಂಭಾಜಿ ಮಹಾರಾಜ್ ಕುರಿತಂತೆ  ಸತೀಶ್ ಜಾರಕಿಹೊಳಿ  ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಈಗ ವಿವಾದ ಹುಟ್ಟುಹಾಕಿದೆ.

ಸತೀಶ್ ಅವರ ಇಂತಹ ಹೇಳಿಕೆಗಳಿಗೆ ಅವರ ಪಕ್ಷದ ನಾಯಕ ರಾಹುಲ್‍ಗಾಂಧಿ ಅವರ ಸಮ್ಮತಿ ಇದೆಯೇ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಶ್ನಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಳೆದ ಭಾನುವಾರ  ಸತೀಶ್ ಜಾರಕಿಹೊಳಿ ಮಾತುಗಳು ವ್ಯಾಪಕ ವಿವಾದಕ್ಕೆ ಕಾರಣವಾಗಿದೆ.

ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ಮತ್ತೊಂದು ವೀಡಿಯೋ ಇದೀಗ ವೈರಲ್ ಆಗಿದೆ.

ಅದರಲ್ಲಿ ಸತೀಶ್ ಜಾರಕಿಹೊಳಿ, ಭಾರತದ ಇತಿಹಾಸದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಾಂಭಾಜಿ ಮಹಾರಾಜ್‍ರನ್ನು ಬ್ರಿಟಿಷರು ಹತ್ಯೆ ಮಾಡಿದರು. ಶಿವಾಜಿ ಮಹಾರಾಜರಿಗೆ ವಿಷ ಹಾಕಿದ್ದಕ್ಕಾಗಿ ಬ್ರಿಟಿಷರು ಸಾಂಭಾಜಿ ಅವರನ್ನು ಬಂಧಿಸಿದ್ದರು.

ಆದರೂ ಇತಿಹಾಸದಲ್ಲಿ ಸಾಂಭಾಜೀಯವರನ್ನು ಧರ್ಮವೀರ ಎಂದು ಹೇಳಲಾಗಿದೆ ಎಂದು ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ.

ಈ ವಿಡಿಯೋವನ್ನು ಟ್ವೀಟ್ ಮಾಡಿರುವ ದೇವೇಂದ್ರ ಫಡ್ನವೀಸ್, ಆ ಸೂಕ್ಷ್ಮ ತಪ್ಪು ಮಾಹಿತಿ, ಅವಮಾನಕಾರಿ ಸುಳ್ಳು ಹೇಳಿಕೆ ಕುರಿತಂತೆ ರಾಹುಲ್‍ಗಾಂಯವರ ಅಭಿಪ್ರಾಯವೇನು ಎಂದು ಪ್ರಶ್ನಿಸಿದ್ದಾರೆ.

ಸತೀಶ್ ಜಾರಕಿಹೊಳಿ ಅವರ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಹೇಳಿಕೆಗಳೇ ಎಂದು ವ್ಯಂಗ್ಯವಾಡಿದ್ದಾರೆ.

ಛತ್ರಪತಿ ಶಾಂಭಾಜಿ ಮಹಾರಾಜ್ ಅವರಿಗೆ ಅವಾಮಾನವಾಗುವುದನ್ನು ನಾವು ಸಹಿಸುವುದಿಲ್ಲ ಎಂದು ಫಡ್ನವೀಸ್ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಸತೀಶ್ ಜಾರಕಿಹೊಳಿ ಏನು ಹೇಳುವರೋ ಕಾದು ನೋಡಬೇಕಿದೆ.