ಆರ್.ಅಶೋಕ್ ವಿರುದ್ಧ ಕಾಂಗ್ರೆಸ್ ಕಿಡಿ

ಬೆಂಗಳೂರು: ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಗಳ ಹೆಗಲ ಮೇಲೆ ಕೈ ಇಟ್ಟು ಕಂದಾಯ ಸಚಿವ ಆರ್.ಅಶೋಕ್  ಫೋಟೋ ಫೋಸ್ ಕೊಟ್ಟಿರುವುದಕ್ಕೆ ಕಾಂಗ್ರೆಸ್ ಕಿಡಿಕಾರಿದೆ.

ಪ್ರಧಾನಮಂತ್ರಿ ಕಾರ್ಯಕ್ರಮದಲ್ಲಿ ನಡೆದ ಫೋಟೋ ಸೆಷನ್ನಲ್ಲಿನ ಲೋಪಗಳನ್ನು ಪಟ್ಟಿ ಮಾಡಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್,ಅಶೋಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಸ್ವಾಮೀಜಿಗಳಿಗೆ ಅವರದೇ ಆದ ಗೌರವ, ಘನತೆ ಇರುತ್ತದೆ. ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳು ಅಶೋಕ್ ಅವರಿಗೆ ಸದರ ಎನಿಸಿದ್ದಾರೆಯೆ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದೆ.

ಇದೇ ರೀತಿ ಮೋದಿ ಅವರ ಹೆಗಲಿಗೆ ಕೈ ಹಾಕುವ ಧೈರ್ಯ ಅಶೋಕ್ ಅವರಿಗಿದೆಯೇ ಎಂದು ಪ್ರಶ್ನಿಸಿದೆ.

ಧರ್ಮ, ಸಂಸ್ಕೃತಿಯ ಬಗ್ಗೆ ಮಾತನಾಡುವ ಬಿಜೆಪಿ ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನ ಇಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಮತ್ತೊಂದು ಫೋಟೊದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರನ್ನು ಪಕ್ಕಕ್ಕೆ ತಳ್ಳಿ ಪ್ರಧಾನಿಯವರ ಬಳಿ ನಿಂತು ಫೋಟೋಗೆ ಫೋಸ್ ಕೊಡಲು ಪ್ರಯತ್ನಿಸಿದ್ದಾರೆ.

ಒಕ್ಕಲಿಗರ ಅಭಿವೃದ್ಧಿ ಅಧ್ಯಕ್ಷರೂ ಆದ ಕೃಷ್ಣಪ್ಪ , ಗುರುಗುಂಡ ಬ್ರಹ್ಮೇಶ್ವರ ಮಠದ ಶ್ರೀ ನಂಜಾವಧೂತ ಸ್ವಾಮೀಜಿಗಳ ಪಕ್ಕದಲ್ಲಿ ನುಗ್ಗಿ ಬಂದು ಫೋಸ್ ಕೊಡಲು ಯತ್ನಿಸಿದ್ದಾರೆ.

ಫೋಟೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ , ರಾಜ್ಯದ ಮುಖ್ಯಮಂತ್ರಿ ಫೋಟೋ ತೆಗೆಸಿಕೊಳ್ಳಲು ಹರಸಾಹಸ ಪಡಬೇಕಿದೆ ಎಂದು ವ್ಯಂಗ್ಯವಾಡಿದೆ.

ಪ್ರಧಾನಿ ಮೋದಿ ಅವರ ಪಕ್ಕದಲ್ಲಿ ಸ್ವತಂತ್ರವಾಗಿ ನಿಲ್ಲಲು ಬಸವರಾಜ ಬೊಮ್ಮಾಯಿ ಅವರಿಗೆ ಸಾಧ್ಯವಾಗುತ್ತಿಲ್ಲವೆಂದರೆ ಇದು ಮುಖ್ಯಮಂತ್ರಿ ಹುದ್ದೆಗೆ ಆಗುತ್ತಿರುವ ಅವಮಾನ ಎಂದು ಟೀಕಿಸಿದೆ.

ಜಗ್ಗೇಶ್ ಹಿಂದೆ ನಿಂತು ಅವರನ್ನು ತಳ್ಳಿಕೊಂಡು ಮುಖ ತೋರಿಸುವ ಸಿಎಂ ಬೊಮ್ಮಾಯಿ ಅವರ ಸ್ಥಿತಿ ಶೋಚನೀಯ ಎಂದು ಕುಟುಕಿದೆ.