ಮೊದಲ ಬಾರಿಗೆ ಮತಪಟ್ಟಿಗೆ ಸೇರಿದವರಿಗೆ ಹೊಸ ದಾಖಲೆ ಸೃಷ್ಟಿಸಲು ಮೋದಿ ಕರೆ

ನವದೆಹಲಿ: ಮೊದಲ ಬಾರಿಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಿರುವವರು ತಮ್ಮ ಹಕ್ಕು ಚಲಾಯಿಸುವ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಹೊಸ ದಾಖಲೆ ಸೃಷ್ಟಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಟ್ವಿಟ್ ಮೂಲಕ ಹೊಸ ಮತದಾರರಿಗೆ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನ ಮಂತ್ರಿಗಳು ಉತ್ತೇಜಿಸಿದ್ದಾರೆ.

ದೇವಭೂಮಿಯ ಎಲ್ಲಾ ಮತದಾರರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಬೇಕು ಎಂದು ಟ್ವಿಟ್ ಮಾಡಿ ವಿನಂತಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಹಿಮಾಚಲ ಪ್ರದೇಶದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವ ಮೂಲಕ ಸುಭದ್ರ ಸರ್ಕಾರ ಆಯ್ಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಹಿಮಾಚಲ ಪ್ರದೇಶವನ್ನು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿಡುವ ಮೂಲಕ ದೇವಭೂಮಿಯ ಜನರ ಆಕಾಂಕ್ಷೆಗಳನ್ನು ಬಲಿಷ್ಠ ಮತ್ತು ಭ್ರಷ್ಟಾಚಾರ ಮುಕ್ತ ಸರ್ಕಾರ ಮಾತ್ರ ಈಡೇರಿಸಬಲ್ಲದು ಎಂದು ಹೇಳಿದ್ದಾರೆ

ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಚುನಾವಣೆ ಪ್ರಾರಂಭವಾಗಿದ್ದು 55 ಲಕ್ಷಕ್ಕೂ ಅಧಿಕ ಮತದಾರರು ಮತ ಚಲಾಯಿಸಲಿದ್ದಾರೆ.

ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.