ಬೆಂಗಳೂರು: ಕಾಲಮಿತಿಯೊಳಗೆ ಕಡತಗಳನ್ನು ವಿಲೇವಾರಿ ಮಾಡದಿದ್ದರೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ಕೊಟ್ಟಿದ್ದಾರೆ.
ರೇಸ್‍ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಕಡತಗಳು ವಿಳಂಬವಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳ ಅಧಿಕೃತ ಕಚೇರಿ ಕೃಷ್ಣಾದಲ್ಲೇ ಪ್ರಮುಖ ಇಲಾಖೆಗಳ ಸಾವಿರಾರು ಕಡತಗಳು ಎರಡರಿಂದ ಮೂರು ತಿಂಗಳಾದರೂ ವಿಲೇವಾರಿಯಾಗದೆ ಬಾಕಿ ಉಳಿದಿರುವುದಕ್ಕೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನಿನ ತೊಡಕುಗಳನ್ನು ಮುಂದಿಟ್ಟುಕೊಂಡು ಕಡತ ವಿಲೇವಾರಿ ಮಾಡದಿದ್ದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಬೊಮ್ಮಾಯಿ ಹೇಳಿದರು.
ಕೃಷ್ಣಾದಲ್ಲಿ ಕಡತಗಳ ವಿಲೇವಾರಿಗಾಗಿ ಡಿಜಿಟಲ್ ವ್ಯವಸ್ಥೆಯನ್ನು ಅನುಷ್ಠಾನ ಮಾಡಲಾಗಿದೆ.
ಕಳೆದ ಮೂರು ತಿಂಗಳಿನಿಂದ ಪ್ರಮುಖ ಇಲಾಖೆಗಳ ಕಡತಗಳು ಹಾಗೆಯೇ ಬಾಕಿ ಉಳಿದಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಮುಖ್ಯಮಂತ್ರಿಗಳ ಕಾರ್ಯದರ್ಶಿ ಗಿರೀಶ್ ಹೊಸೂರ್ ಅವರ ನೇತೃತ್ವದಲ್ಲಿ ಕಡತಗಳ ವಿಲೇವಾರಿಗಾಗಿ ಸಿಬ್ಬಂದಿಯನ್ನೂ ನೇಮಕ ಮಾಡಲಾಗಿದೆ.
ಅಧಿಕಾರಿಗಳ ವರ್ಗಾವಣೆ, ಮುಂಬಡ್ತಿ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ, ಕಾಮಗಾರಿಗಳ ಅನುಷ್ಠಾನಕ್ಕೆ ಅನುಮತಿ ಸೇರಿದಂತೆ ಮುಖ್ಯಮಂತ್ರಿಗಳ ಕಚೇರಿಗೆ ಪ್ರಮುಖ ಕಡತಗಳೇ ರವಾನೆಯಾಗುತ್ತವೆ.
ಬಾಕಿ ಕಡತ ವಿಲೇವಾರಿ ಆಗುವವರೆಗೆ ಭಾನುವಾರವೂ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿ ಎಂದು ಮುಖ್ಯ ಕಾರ್ಯದರ್ಶಿಗೆ ಸಿಎಂ ಸೂಚನೆ ಕೂಡಾ ನೀಡಿದ್ದರು.
ಇಷ್ಟೆಲ್ಲಾ ಆದರೂ ಕಡತ ವಿಲೇವಾರಿ ಆಗಲೇ ಇಲ್ಲ.
ರಾಜ್ಯದಲ್ಲಿ ಇ-ಆಡಳಿತ ಜಾರಿಗೊಳಿಸಿಯೂ ದಶಕ ಉರುಳಿದೆ. ಈ ನಡುವೆಯೂ ಆನ್‍ಲೈನ್ ಮೂಲಕ ಕಡತ ವಿಲೇವಾರಿ ಮಾಡುವುದರಲ್ಲಿ ಸುಧಾರಣೆ ಕಂಡಿಲ್ಲ .
ಸಚಿವಾಲಯದಲ್ಲಿ ಯಾವಾಗ ನೋಡಿದರೂ ಸರ್ವರ್ ಡೌನ್ ಎಂದು ದೂರು ಹೇಳಿಕೊಳ್ಳುವುದು ಸಾಮಾನ್ಯವಾಗಿದೆ.
ಕಡತ ವಿಲೇವಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದೆಷ್ಟೇ ಗಡುವು ನೀಡಿ ಎಚ್ಚರಿಕೆ ನೀಡಿದ್ದರೂ 2021ರ ಅಕ್ಟೋಬರ್ 25ರ ಅಂತ್ಯಕ್ಕೆ ಒಟ್ಟು 31,308 ಕಡತಗಳು ವಿಲೇವಾರಿಗೆ ಬಾಕಿ ಉಳಿದಿವೆ.
ಈ ಹಿನ್ನೆಲೆಯಲ್ಲಿ ಶನಿವಾರ ಸಭೆ ನಡೆಸಿದ ಬೊಮ್ಮಾಯಿ ಅಧಿಕಾರಿಗಳಿಗೆ ಶೀಘ ಕಡತ ವಿಲೇವಾರಿ ಮಾಡುವಂತೆ ತಾಕೀತು ಮಾಡಿದರು.

