ಮೈಸೂರು: ಬ್ರಾಹ್ಮಣ ಸಮುದಾಯದ ಬಗ್ಗೆ ಪ.ಮಲ್ಲೇಶ್ ಅವಹೇಳನವಾಗಿ ಮಾತನಾಡಿರುವುದನ್ನು ಖಂಡಿಸಿ ನ.21ರಂದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿರುವುದಾಗಿ ಮೂಡ ಮಾಜಿ ಅಧ್ಯಕ್ಷ ಎಚ್. ವಿ. ರಾಜೀವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಮುದಾಯವನ್ನು ವಿನಾಕಾರಣ ದೋಷಿಸುವ ಹಲವಾರು ಪ್ರಕರಣಗಳು ಕಂಡುಬರುತ್ತಿದೆ ಎಂದು ಹೇಳಿದರು.
ಅದಕ್ಕೆ ಹೊಸ ಸೇರ್ಪಡೆ ಎಂದರೆ ಇತ್ತೀಚಿಗೆ ಪ.ಮಲ್ಲೇಶ್ ಎಂಬವರು ಬ್ರಾಹ್ಮಣ ಜನಾಂಗದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಎಂದರು.
ಬ್ರಾಹ್ಮಣ ಜನಾಂಗ ಇಂದು ಅಲ್ಪಸಂಖ್ಯಾತ ಸಮುದಾಯವಾಗಿದೆ, ನಮ್ಮ ರಾಜ್ಯದ/ದೇಶದ ಜನಸಂಖ್ಯೆಯಲ್ಲಿ ಶೇಕಡ 3ರಷ್ಟು ಮಾತ್ರ ಬ್ರಾಹ್ಮಣ ಜನಾಂಗವಿದೆ.
ಬ್ರಾಹ್ಮಣ ಸಮುದಾಯ ಎಂದಿಗೂ ಸಮಾಜ ಒಡೆಯುವ ಕೆಲಸ ಮಾಡಿಲ್ಲ,ಮಾಡುವುದೂ ಇಲ್ಲ, ಬ್ರಾಹ್ಮಣ ಸಮುದಾಯದ ಉದ್ದೇಶ ಸದೃಢ ಸಮಾಜದ ನಿರ್ಮಾಣವೇ ಆಗಿದೆ ಎಂದು ತಿಳಿಸಿದರು.
ಬ್ರಾಹ್ಮಣ ಸಮುದಾಯ ಎಂದಿಗೂ ಇತರೆ ಜನಾಂಗದವರನ್ನು ದೂಷಣೆ ಮಾಡಿಲ್ಲ , ಹೀಗಿದ್ದರೂ ಆಗಾಗ್ಗೆ ನಮ್ಮ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅನಾವಶ್ಯಕವಾಗಿ ಬ್ರಾಹ್ಮಣ ಸಮುದಾಯವನ್ನು ಹಿಯಾಳಿಸುತ್ತಿರುವುದನ್ನು ಇನ್ನು ಸಹಿಸಲಾಗದು.ಇದನ್ನು ಖಂಡಿಸಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದರು.
ಪ.ಮಲ್ಲೇಶ್ ನೀಡಿರುವ ಹೇಳಿಕೆ ಖಂಡಿಸಿ ಮತ್ತು ಮುಂದೆ ಯಾರು ಈ ರೀತಿಯ ಹೇಳಿಕೆ ನೀಡಬಾರದು ಎಂದು ಆಗ್ರಹಿಸಿ ಸೋಮವಾರ ಬ್ರಾಹ್ಮಣ ಸಮುದಾಯ ಪ್ರತಿಭಟನಾ ಮೆರೆವಣಿಗೆ ಹಮ್ಮಿಕೊಂಡಿದೆ ಎಂದು ರಾಜೀವ್ ತಿಳಿಸಿದರು.
ಅಂದು ಬೆಳಗ್ಗೆ 10:30ಕ್ಕೆ ಮೈಸೂರಿನ ಶಂಕರ ಮಠದ ವಿದ್ಯಾಶಂಕರ ಕಲ್ಯಾಣ ಮಂಟಪ (ಗನ್ ಹೌಸ್) ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಲಿದೆ.
ನಂತರ ಜಿಲ್ಲಾಧಿಕಾರಿ ಕಛೇರಿಗೆ ತಲುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮನವಿಯನ್ನು ಸರ್ಕಾರಕ್ಕೆ ಕಳುಹಿಸುವಂತೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ. ಟಿ. ಪ್ರಕಾಶ್, ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ. ಆರ್. ನಾಗರಾಜ್, ನಗರಪಾಲಿಕೆ ಸದಸ್ಯ ರಾಮಪ್ರಸಾದ್, ವಿಪ್ರಪರಸ್ಪರ ಸಹಾಯ ಸಮಿತಿಯ ಸುಂದರೇಶನ್, ವಿಪ್ರ ಮಹಿಳಾ ಸಂಗಮ ಅಧ್ಯಕ್ಷೆ ಡಾ. ಲಕ್ಷ್ಮಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್ ಹಾಜರಿದ್ದರು.

