ಪ್ರತಾಪ್ ಸಿಂಹ ವಿರುದ್ದ ಸಿಡಿದೆದ್ದ ಗ್ರಾಮಸ್ಥರು

ಮೈಸೂರು: ಮೈಸೂರು – ಕುಶಾಲನಗರ ನಡುವಿನ ರೈಲು ಮಾರ್ಗಕ್ಕಾಗಿ ಜಮೀನು ನೋಟಿಫೈ ಮಾಡಿದ ಹಿನ್ನಲೆಯಲ್ಲಿ ಹುಣಸೂರು ತಾಲ್ಲೂಕು ಚಿಕ್ಕ ಬಿಚ್ಚನಹಳ್ಳಿ ಗ್ರಾಮಸ್ಥರು ಸರ್ಕಾರ ಹಾಗೂ ಪ್ರತಾಪ್ ಸಿಂಹ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಇದು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದು ಚಿಕ್ಕ ಬಿಚ್ಚನಹಳ್ಳಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರತಾಪ್ ಸಿಂಹ ಬೇರೆ ಕಡೆ ಹೋಗುತ್ತಿದ್ದ ರೈಲ್ವೆ ಮಾರ್ಗವನ್ನು ನಮ್ಮ ಕಡೆ ಹೋಗುವಂತೆ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.

ಉದ್ಯಮಿಗಳು, ಪ್ರಭಾವಿಗಳ ಒತ್ತಡಕ್ಕೆ ಮಣಿದಿರುವ ಪ್ರತಾಪ್ ಸಿಂಹ ಅವರು ಎರಡು ಭಾರಿ ರೈಲ್ವೆ ಮಾರ್ಗ ಬದಲಾವಣೆ ಮಾಡಿದ್ದಾರೆ.

ಈಗ ಅರ್ಧ ಎಕರೆ,ಹತ್ತು ಕುಂಟೆ ಜಮೀನು ಇರುವ ಬಡ ರೈತರ ಜೀವನವನ್ನು ಕಸಿದು ಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಪ್ರಾಣ ಕೊಟ್ಟರೂ ಜಮೀನು ಕೊಡುವುದಿಲ್ಲ ಎಂದು ಬಿಜೆಪಿ ಸರ್ಕಾರ  ಪ್ರತಾಪ್ ಸಿಂಹ ವಿರುದ್ಧ ಧಿಕ್ಕಾರ ಕೂಗಿದರು.

ಮೊದಲು ನಮ್ಮ ಜೀವನಕ್ಕೆ ದಾರಿ ತೋರಿಸಲಿ ಆ ನಂತರ ನಮ್ಮ ಜಮೀನು ತಗೆದುಕೊಳ್ಳಲಿ. ನಮ್ಮ ಜಮೀನು ಕಿತ್ತುಕೊಂಡರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಚಿಕ್ಕ ಬಿಚ್ಚನಹಳ್ಳಿ   ಗ್ರಾಮಸ್ಥರು ಎಚ್ಚರಿಸಿದ್ದಾರೆ.