ಆಸೆ ಎಂಬ ಮರೀಚಿಕೆ ಹಿಂದೆ ಓಡುವುದು ಬಿಡಿ – ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಮೈಸೂರು: ಆಸೆ,ಮೋಹ,ಅಹಂಕಾರ ಎಲ್ಲವನ್ನೂ ಬಿಟ್ಟು ನನ್ನಲ್ಲಿಗೆ ಬಾ,ನೀನು ಮಾಡುವ ಕರ್ಮದ ಅನುಸಾರವಾಗಿ ಪಲಾ ಫಲಾ ಸಿಗುತ್ತದೆ ಎಂದು ಶ್ರೀ ಕೃಷ್ಣ ಅರ್ಜುನನಿಗೆ ಬೋದಿಸಿದರು. ಇದನ್ನು ನಾವೆಲ್ಲ ಅನುಸರಿಸಬೇಕು ಎಂದು ಶ್ರೀ ಗಣಪತಿ‌ ಸಚ್ಚಿದಾನಂದ ಸ್ವಾಮೀಜಿ ತಿಳಿಸಿದರು.

ಇಂಟರ್ ನ್ಯಾಷನಲ್ ಗೀತಾ ಫೌಂಡೇಶನ್ ಟ್ರಸ್ಟ್, ಬೆಂಗಳೂರು ಮತ್ತು ಅವಧೂತ ದತ್ತ ಪೀಠ, ಮೈಸೂರು ಇವರ ವತಿಯಿಂದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ಏರ್ಪಡಿಸಿದ್ದ 18 ನೇ ಜಾಗತಿಕ ಗೀತಾ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿ ಮಾತನಾಡಿದರು.

ಆಸೆ ಎಂಬ ಮರೀಚಿಕೆ ಹಿಂದೆ ಓಡುವುದು ಬಿಟ್ಟು ಒಳ್ಳೆಯ ಮನಸ್ಸಿನಿಂದ ಉತ್ತಮ ಕೆಲಸ ಮಾಡಬೇಕು ಹಾಗಾದಾಗ ಮಾತ್ರ ನಾವು ಮನುಷ್ಯರಾಗಲು ಸಾಧ್ಯ ಎಂದು ತಿಳಿಸಿದರು.

ಆರೋಗ್ಯ ನಮ್ಮ ಕೈನಲ್ಲಿ ಇಲ್ಲ,ಜ್ಞಾನೇಂದ್ರಿಯಗಳು ಇಷ್ಟ ಬಂದ ಆಸೆ ಹೊರ ಹಾಕುತ್ತವೆ.ಮೊದಲು ನಮ್ಮ ಜ್ಞಾನೇಂದ್ರಿಯಗಳಿಗೆ ಜ್ಞಾನ ನೀಡಬೇಕು‌ ಎಂದು ತಿಳಿಸಿದರು.

ಅರ್ಜುನನಿಗೆ‌ ಶ್ರೀ ಕೃಷ್ಣ ‌ಗೀತೋಪದೇಶ ಮಾಡುವಾಗ‌ ಪದೇ ಪದೆ ನಾನು ಎಲ್ಲವನ್ನೂ ಪರಿತ್ಯಾಗ ಮಾಡಿ ಸನ್ಯಾಸಿಯಾಗುತ್ತೇನೆ‌ ಎಂದು ಹೇಳುತ್ತಲೇ ಇರುತ್ತಾನೆ.

ಆಗ ಕೃಷ್ಣ ಯಾರು ಏನು ಕೆಲಸ ಮಾಡಬೇಕು ಎಂಬುದು ಮೊದಲೇ ನಿರ್ಧಾರವಾಗಿರುತ್ತದೆ.ಮೊದಲು ನೀನು ನಿನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡು. ಕರ್ಮದ ಅನುಸಾರ ಫಲಗಳು ಸಿಗುತ್ತವೆ ಎಂದು ಗೀತೆಯ ಮೂಲಕ ತಿಳಿಸಿಕೊಟ್ಟನು.

ಆದರೂ 18ನೆ ಅಧ್ಯಾಯದ ಮುಕ್ತಾಯದ ವೇಳೆಗೆ ಅರ್ಜುನನಿಗೆ ಭಗವದ್ಗೀತೆಯ ‌ಅರಿವಾಯಿತು.ಬದುಕಿನ ತಿಳುವಳಿಕೆ ಮೂಡಿತು.

ಹೀಗೆ ಭಗವದ್ಗೀತೆಯಿಂದ ಅರ್ಜುನನಿಗೆ ಬೋಧಿಸುವ ಮೂಲಕ‌ ಶ್ರೀ ಕೃಷ್ಣ ಪರಮಾತ್ಮ ಇಡೀ ಮನುಕುಲಕ್ಕೆ ಮಾನವರು ಹೇಗಿರಬೇಕು ಎಂಬುದನ್ನ ತಿಳಿಸಿಕೊಟ್ಟಿದ್ದಾರೆ.

ದಿನಕ್ಕೆ ಒಂದು ಶ್ಲೋಕ ಕಲಿಯಿರಿ ಆಗ ಇಡೀ‌ ಭಗವದ್ಗೀತೆಯನ್ನು ಕಲಿಯಬಹುದು ಎಂದು ಹೇಳಿದರು

ಗೀತೆಯಲ್ಲಿ ಕನಿಷ್ಠ ಒಂದು‌ ಶ್ಲೋಕದಲ್ಲಿರುವುದನ್ನಾದರೂ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗಣಪತಿ ‌ಶ್ರೀಗಳು ಸಲಹೆ ನೀಡಿದರು.

ಪಾವಗಡ ರಾಮಕೃಷ್ಣ ಆಶ್ರಮದ ಜಪಾನಂದ ಸ್ವಾಮೀಜಿ ಮಾತನಾಡಿ,ಭಗವದ್ಗೀತೆಯನ್ನು ಕೇವಲ ಪೂಜೆಗಾಗಿ ಬಳಸುವುದಲ್ಲ,ಅದರಲ್ಲಿನ ಶ್ಲೋಕಗಳನ್ನ ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು

ನಾವು ಇಡೀ‌ವಿಶ್ವಕ್ಕೆ ಆಧ್ಯಾತ್ಮ ಹೇಳಿಕೊಟ್ಟವರು.ಆದರೆ ನಮ್ಮ ಶಾಲೆಗಳಲ್ಲಿ ತರಗತಿ ಪ್ರಾರಂಭಕ್ಕೆ ಮುನ್ನ ಹತ್ತು ನಿಮಿಷ ಮೆಡಿಟೇಶನ್ ಮಾಡಲು ಹೊರಟರೆ ಬಹಳ ವಿರೋಧ ‌ವ್ಯಕ್ತವಾಯಿತು ಎಂದು ಬೇಸರ‌

ವ್ಯಕ್ತಪಡಿಸಿದರು.

ಶುದ್ಧ ಭಕ್ತಿ,ಶುದ್ಧ ಹೃದಯ,ಶುದ್ದ ಮನಸಿನಿಂದ ಪ್ರಾರ್ಥಿಸಿದರೆ ಭಗವಂತ ಪ್ರಸನ್ನನಾಗುತ್ತಾನೆ ಎಂದು ಹೇಳಿದರು.

ನಮ್ಮಲ್ಲಿ ಇತ್ತೀಚಿನ ದಿನಗಳಲ್ಲಿ ಮಾನವೀಯತೆ ಎಂಬುದು ಮರೆಯಾಗುತ್ತಿದೆ ಎಂದು ಉದಾಹರಣೆ ಸಹಿತ ವಿವರಿಸಿದರು.

ಭಗವದ್ಗೀತೆಯು ಮಾನವೀಯತೆಯನ್ನು ಬೆಳೆಸುತ್ತದೆ.ಪ್ರತಿದಿನ ಗೀತೆಯನ್ನು ಓದಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ದೇಶದ ಬಗ್ಗೆ ನಮ್ಮ ಸಂಸ್ಕೃತಿ,ಪರಂಪರೆ ಬಗ್ಗೆ ತಿಳಿಸಿಕೊಟ್ಟು ಅವರು ಸರಿಯಾದ ದಾರಿಯಲ್ಲಿ ಹೋಗುವಂತೆ ಮಾಡಬೇಕೆಂದು ಜಪಾನಂದ ಸ್ವಾಮೀಜಿ ಸಲಹೆ ನೀಡಿದರು.

ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರು ಧನ್ಯವಾದ ಸಮರ್ಪಣೆ ಮಾಡಿ ಮಾತನಾಡಿದರು.

ಭಗವದ್ಗೀತೆಯ 18 ನೆ ಅಧ್ಯಾಯದ ಅರ್ಥವನ್ನು ಕೆಲವು ಉದಾಹರಣೆ ಮೂಲಕ ತಿಳಿಸಿಕೊಟ್ಟರು.

ಆಶ್ರಮದ ಭಜನಾ ಮಂಡಳಿಯ ಮಣಿ ಮತ್ತು ಮಹೇಶ್ ತಂಡದವರಿಂದ ಗೀತಾ ಸಾರಂ ಶ್ಲೋಕಗಳ ಪಠಣ ಮಾಡಲಾಯಿತು.

ನಂತರ ಜಿ ಎಫ್ ಟಿ ಮತ್ತು ಎಸ್ ಜಿ ಎಸ್ ತಂಡದವರು ಗೀತೆಯ 18ನೆ  ಅಧ್ಯಾಯದ 1-40 ತನಕ ಶ್ಲೋಕ ಪಠಣ ಮಾಡಿದರು.

ಜಿ ಎಫ್ ಟಿ ಬಗ್ಗೆ ಡಾ. ಸಿ.ಎನ್.ಗುಪ್ತ ಅವರು ಸ್ಲೈಡ್ ಗಳ ಮೂಲಕ ಸಭಿಕರಿಗೆ ಪರಿಚಯ ಮಾಡಿಕೊಟ್ಟರು.

ಜಿ ಎಫ್ ಟಿ 2003ರಲ್ಲಿ ಪ್ರಾರಂಭವಾಯಿತು.ಮೊದಲ ಜಾಗತಿಕ ಗೀತಾ  ಸಮ್ಮೇಳನವನ್ನು 2003ರಲ್ಲೇ ಹಮ್ಮಿಕೊಳ್ಳಲಾಯಿತು.

ಅಲ್ಲಿಂದ ಇಲ್ಲಿಯ ತನಕ 17 ಜಾಗತಿಕ ಗೀತಾ ಸಮ್ಮೇಳನಗಳು ಯಶಸ್ವಿಯಾಗಿವೆ ಇಂದು ಅವಧೂತ ಪೀಠಂನಲ್ಲಿ 18ನೆ ಸಮ್ಮೇಳನ ಯಶಸ್ವಿಯಾಗಿ ನಡೆದಿದೆ ಎಂದು ತಿಳಿಸಿದರು.

ಮೊಟ್ಟ ಮೊದಲಿಗೆ 2007ರಲ್ಲಿ ಯು.ಕೆಯಲ್ಲಿ ಹೊರದೇಶದಲ್ಲಿ ಸಮ್ಮೇಳನ ಜರುಗಿತು. ನಂತರ 6ನೆ ಸಮ್ಮೇಳನ ನ್ಯೂಯಾರ್ಕ್ ನಲ್ಲಿ. ಹಾಗೂ 10ನೆ ಸಮ್ಮೇಳನ ಸಮ್ಮೇಳನ ಬರ್ಮಿಂಗ್ ಹ್ಯಾಮ್ ನಲ್ಲಿ ಯಶಸ್ಯಾಗಿ ನಡೆಯಿತು.

ಮೈಸೂರಿನ ಅವಧೂತ ದತ್ತ ಪೀಠಂನಲ್ಲಿ 2013ರಲ್ಲಿ 11ನೆ ಸಮ್ಮೇಳನ ಜರುಗಿತ್ತು.ಇದೀಗ 18ನೆ ಸಮ್ಮೇಳನ ಕೂಡಾ ಪೂಜ್ಯ ಸ್ವಾಮೀಜಿ ಯವರ ಆಶೀರ್ವಾದ ದೊಂದಿಗೆ ಜರುಗಿರುವುದು ಅತೀವ ಸಂತಸ ತಂದಿದೆ ಎಂದು ಡಾ.ಗುಪ್ತ ತಿಳಿಸಿದರು.

ಕೆ.ಜಿ.ರಾಘವನ್ ಅವರು ಭಗವದ್ಗೀತೆಯ 18ನೆ ಅಧ್ಯಾಯದ ಬಗ್ಗೆ ವಿವರಿಸಿ ಎಲ್ಲವನ್ನೂ ಶ್ರೀ ಕೃಷ್ಣನಿಗೆ ಅರ್ಪಿಸಿದರೆ ಧನ್ಯರಾಗುತ್ತೇವೆ ಎಂದು ತಿಳಿಸಿದರು.

ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಆಶೀರ್ವಚನದ ಜತೆಗೆ ಭಗವದ್ಗೀತೆಯ ಅರ್ಥವನ್ನು ವಿಸ್ತಾರವಾಗಿ ತಿಳಿಸಿಕೊಟ್ಟರು.

ಪಾವಗಡ ರಾಮಕೃಷ್ಣ ಆಶ್ರಮದ ಶ್ರೀ ಜಪಾನಂದ ಸ್ವಾಮೀಜಿ ಹಾಗೂ ಶ್ರೀ ಕುಪ್ಪಾ ವಿಶ್ವನಾಥ ಶರ್ಮ ಅವರು ಆಶೀರ್ಚನ ನೀಡಿದರು.

ಜಸ್ಟೀಸ್ ಮಂಜುಳಾ ಚೆಲ್ಲೂರ್ ಹಾಗೂ ಡಾ.ಎಸ್.ರಂಗನಾಥ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ನಾಳೆ ಭಗವದ್ಗೀತೆಯ 700 ಶ್ಲೋಕಗಳನ್ನು ಕಂಠಪಾಠ ಮಾಡಿದವರಿಗೆ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಚಿನ್ನದ ಪದಕ ಹಾಗೂ ಸರ್ಟಿಫಿಕೇಟ್ ನೀಡಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಗೌರವಿಸುವರು.