ಬೆಂಗಳೂರು: ಕೊತ್ವಾಲ ರಾಮಚಂದ್ರನ ಶಿಷ್ಯರು ಕೂಡಾ ಇಂದು ರೌಡಿಗಳಾಗಿದ್ದಾರೆ, ಹಾಗಂತ ಡಿ.ಕೆ.ಶಿವಕುಮಾರ್ ಅವರನ್ನು ರೌಡಿ, ಮಾಜಿ ರೌಡಿ ಎನ್ನುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ನೀಡಿದರು.
ಆ ದಿನಗಳು ಅದನ್ನು ಹೇಳಿವೆ ಎಂದು ಪರೋಕ್ಷವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವರು ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರೌಡಿಲಿಸ್ಟಿನಲ್ಲಿ ಇದ್ದವರೆಲ್ಲ ರೌಡಿ ಎಂದು ಹೇಳಲಾಗದು.ರಾಜಕೀಯ ಕಾರಣಕ್ಕೆ ನನ್ನ ಹೆಸರೂ ರೌಡಿ ಲಿಸ್ಟ್ ನಲ್ಲಿತ್ತು. ನಮ್ಮ ಪಕ್ಷದ ಕಾರ್ಯಕರ್ತರೂ ಆ ಲಿಸ್ಟ್ ನಲ್ಲಿದ್ದರು ಎಂದು ತಿಳಿಸಿದರು.
ಹೋರಾಟ ಮಾಡುವುದೇ ರೌಡಿಸಂ ಎಂಬ ಭಾವನೆ ಕಾಂಗ್ರೆಸ್ಸಿನವರದಾಗಿತ್ತು. ರೌಡಿಗಳ ಸೇರ್ಪಡೆ ವಿಚಾರದಲ್ಲಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಸ್ಪಷ್ಟನೆ ನೀಡಿದ್ದಾರಲ್ಲಾ ಎಂದರು.
ಸಿಎಂ ಆಗಿದ್ದ ದೇವರಾಜ ಅರಸು ಅವರು ತಮ್ಮ ಚೇಂಬರ್ನಲ್ಲೇ ನಟೋರಿಯಸ್ ರೌಡಿಗಳ ಜೊತೆ ಸಭೆ ನಡೆಸಿದ್ದರು. ಅಂಥ ಕೆಲಸ ನಾವು ಮಾಡುವುದಿಲ್ಲ ಎಂದು ಹೇಳಿದರು.
ಸಂಜಯ್ ಬ್ರಿಗೇಡ್ ಸೇರಲು ಗೂಂಡಾಗಿರಿ ಅರ್ಹತೆಯಾಗಿತ್ತು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನಲಪಾಡ್ ಗೆ ಇದೇ ಕಾರಣಕ್ಕೇ ನೀಡಿದ್ದಾರೆ.
ನಮ್ಮದು ಮಾಸ್ ಪಾರ್ಟಿ,ನಮ್ಮ ಪಕ್ಷದ ನೀತಿ– ನಿಯತ್ತು ಬದಲಾಗಿಲ್ಲ. ತಂತ್ರಗಾರಿಕೆ ಬದಲಾಗಿದೆ ಅಷ್ಟೇ ಎಂದು ತಿಳಿಸಿದರು.
ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಾಕಿದವರು ಇವರ ದೃಷ್ಟಿಯಲ್ಲಿ ಸೆಲ್ಯುಲರ್ ಗಳು.
ದಾವೂದ್ ಇಬ್ರಾಹಿಂ ಕೂಡ ಇವರಿಗೆ ಸೆಕ್ಯುಲರ್ ಆಗಬಹುದು. ನಾನು ಮೂಲ ಸನಾತನ ಧರ್ಮದಲ್ಲೇ ಇರುವವ ಎಂದು ಹೇಳಿದರು.
ಸೆಕ್ಯುಲರ್ ಯಾರೆಂದು ಗೊತ್ತಾಗಲಿದೆ. ಆರ್ ಎಸ್ ಎಸ್ ನಿಮಗೆ ಕಮ್ಯುನಲ್. ಬಾಂಬ್ ಹಾಕುವವರು ಸೆಕ್ಯುಲರ್ ಗಳು. ಸಮಾಜವಾದಿ ಮಜಾವಾದಿ ಆದುದನ್ನು ಜನತೆ ನೋಡಿದ್ದಾರೆ.
ಇವರ ಜಾತ್ಯತೀತತೆ ಜನರಿಗೆ ತಿಳಿದಿದೆ. ಮಜಾವಾದಿ ಕುಟುಂಬ ವ್ಯಾಮೋಹಿ ಎಂದು ಕರೆಸಿಕೊಳ್ಳುವಷ್ಟೇ ಅರ್ಹತೆ ಇವರದು ಎಂದು ಹೇಳಿದರು ಸಿ.ಟಿ.ರವಿ.
ಅಹಿಂದ ಇವರಿಗೆ ಬೇರೆಯವರನ್ನು ಮುಗಿಸಲು ಅಸ್ತ್ರವಾಗಿದೆ. ಕಾಂಗ್ರೆಸ್ಸಿಗರ 3 ತಲೆಮಾರು, 4 ತಲೆಮಾರಿಗೆ ಆಗುವಷ್ಟು ಸಂಪತ್ತು ಮಾಡಿಕೊಂಡಿದ್ದಾರೆ ಎಂದು ಅವರ ಪಕ್ಷದ ರಮೇಶ್ಕುಮಾರ್ ಹೇಳಿದ್ದಾರೆ.
ದಲಿತ ಮುಖ್ಯಮಂತ್ರಿ ಆಗಬೇಕಿದ್ದ ಡಾ. ಪರಮೇಶ್ವರ್ ಅವರನ್ನು ಸೋಲಿಸಿದ್ದು ಎಲ್ಲರಿಗೂ ಗೊತ್ತಿದೆ. ಮೋಟಮ್ಮ ಆತ್ಮಕಥನದಲ್ಲೂ ಸಿದ್ದರಾಮಯ್ಯರ ರಾಜಕೀಯ ತಂತ್ರವನ್ನು ಬಿಡಿಸಿಟ್ಟಿದ್ದಾರೆ.
ಹಿಂದೂವಾದವೇ ಕೋಮುವಾದ ಎಂದಾದರೆ ಆ ಸನಾತನ ಧರ್ಮವನ್ನು ಬೆಂಬಲಿಸುವವ ನಾನು ಎಂದು ರವಿ ತಿಳಿಸಿದರು.

