ತ್ಯಾಗ ಪೂರ್ವಕವಾದ ಯಾಗವೇ ಶ್ರೇಷ್ಠ

ಮೈಸೂರು:  ನಮ್ಮ ಜೀವನವೇ ಒಂದು ಯಾಗ,ಯಾಗವೆಂದರೆ ತ್ಯಾಗ. ತ್ಯಾಗವಿಲ್ಲದ ಯಾಗವಿಲ್ಲ. ತ್ಯಾಗಪೂರ್ವಕವಾದ ಯಾಗವೇ ಶ್ರೇಷ್ಠವಾದದ್ದು ಎಂದು ವಿದ್ವಾನ್ ಎಸ್ ಕಷ್ಣಮೂರ್ತಿ ಅವರು ತಿಳಿಸಿದರು.

ನಗರದ ಇರ್ವಿನ್ ರಸ್ತೆ ಯಲ್ಲಿರುವ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನ ವತಿಯಿಂದ ಹನುಮ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಜೀವನ ಯಾಗವು ತ್ಯಾಗಪೂರ್ವಕವಾಗಿದ್ದರೆ ಅಂತಹ ಬದುಕು ಸಾರ್ಥಕವಾಗುವುದು ಎಂದು ಅವರು ತಿಳಿಸಿದರು.

ಸಂಜೀವಿನಿ ಸಸ್ಯದ ಬಗ್ಗೆ ತಿಳಿಯದ ಹನುಮಂತ ಇಡೀ ದ್ರೋಣಗಿರಿ ಬೆಟ್ಟವನ್ನೇ ಎತ್ತಿಕೊಂಡು ಯುದ್ಧ ಭೂಮಿಗೆ ತಂದು ಅಚ್ಚರಿ ಮೂಡಿಸುತ್ತಾನೆ.

ಆಗ ಲಕ್ಷ್ಮಣ ಬದುಕುಳಿಯುತ್ತಾನೆ. ಇದು ಪುರಾಣದಲ್ಲಿ ಉಲ್ಲೇಖವಾಗಿರುವ ಕಥೆ. ಹಾಗಾಗಿ ಹನುಮಂತನು ಶಕ್ತಿ ಮತ್ತು ಸಾಮರ್ಥ್ಯದ ಸಂಕೇತ ಎಂದು ಭಾವಿಸಿದ್ದೇವೆ ಎಂದವರು ಹೇಳಿದರು.

ಎಲ್ಲಾ ಬಗೆಯ ದುಷ್ಟಶಕ್ತಿಗಳು ಮತ್ತು ಪಾಪಗಳ ವಿರುದ್ಧ ಜಯ ಸಾಧಿಸಲು ಹನುಮಂತನ ಪ್ರಾರ್ಥನೆ ಮಾಡುವುದು ಬಹಳ ಹಿಂದಿನಿಂದ ನಡೆದು ಬಂದಿದೆ ಎಂದು ಹೇಳಿದರು.

ಇಂದಿನಿಂದ ಡಿ. 13ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು  ಹಾಗೂ  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಆಂಜನೇಯಸ್ವಾಮಿಗೆ ಭಕ್ತಾದಿಗಳ ಶ್ರೇಯಾಭಿವೃದ್ಧಿಗಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ ಪಾಂಚರಾತ್ರ ಆಗಮ ಶಾಸ್ತ್ರ ಪ್ರಕಾರ ಮಹಾ ಸಂಕಲ್ಪ ಪುಣ್ಯಾಹ ವಾಚನ ರಕ್ಷಾ ಬಂಧನ, ಅಂಕುರಾರ್ಪಣ, ಧ್ವಜಾರೋಹಣ, ಕಲಶ ಪ್ರತಿಷ್ಠೆ ಹಾಗೂ ಗರುಡ ದೇವರಿಗೆ ಪಂಚಾಮೃತ ಹಾಗೂ ವಿವಿಧ ದ್ರವ್ಯಗಳಿಂದ ವಿಶೇಷ ಅಭಿಷೇಕವನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಎಸ್. ಕಷ್ಣಮೂರ್ತಿ ಅವರು ನೆರವೇರಿಸಿದರು.

ಇದೇ ಸಂದರ್ಭದಲ್ಲಿ ನೂರಾರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.