ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಗಡಿ ಸಂಘರ್ಷ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಸೋಮವಾರ ರಾಜ್ಯ ಸಂಸದರ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಲಿದೆ.
ಶುಕ್ರವಾರ ಎನ್‍ಸಿಪಿ ಸಂಸದರ ನಿಯೋಗ ಅಮಿತ್ ಷಾ ಅವರನ್ನು ಭೇಟಿ ಮಾಡಿತ್ತು.
ನಮ್ಮ ರಾಜ್ಯದ ಸಂಸದರು ಕೂಡಾ ಇದೇ ಸೋಮವಾರ ಷಾರನ್ನು ಭೇಟಿಯಾಗಿ ಮಹಾರಾಷ್ಟ್ರದವರು ನಡೆಸುತ್ತಿರುವ ಪುಂಡಾಟಿಕೆಯನ್ನು ಗಮನಕ್ಕೆ ತರಲಿದ್ದಾರೆ.
ಇದೇ 14ರಂದು ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಿಎಂ ಜೊತೆ ಅಮಿತ್ ಷಾ ಗಡಿ ವಿವಾದ ಕುರಿತು ಮಾತುಕತೆ ನಡೆಸಲಿದ್ದಾರೆ ಹಾಗಾಗಿ ಅದಕ್ಕೂ ಮೊದಲೇ ನಮ್ಮ ಸಂಸದರು ಷಾ ಅವರನ್ನು ಭೇಟಿಯಾಗಿ ಮಾತನಾಡಲಿದ್ದಾರೆ.
ಸಿಎಂ ಸೂಚನೆ ಮೇರೆಗೆ ರಾಜ್ಯದ ಸಂಸದರು ಅಮಿತ್ ಷಾರನ್ನು ಭೇಟಿಯಾಗಿ ಗಡಿ ವಿವಾದ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದೆಂದು ಮನವಿ ಮಾಡಲಿದ್ದಾರೆ.
ಪ್ರಕರಣವು ನ್ಯಾಯಾಲಯದಲ್ಲಿ ಇರುವ ಕಾರಣ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೆ ಅದು ರಾಜ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ಹಾಗಾಗಿ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೂ ಕೇಂದ್ರ ಸರ್ಕಾರ ಕರ್ನಾಟಕದ ಹಿತ ಕಾಪಾಡಬೇಕೆಂದು ಮನವಿ ಮಾಡಲಿದ್ದಾರೆ.
ಗಡಿ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸೋಮವಾರ ಭೇಟಿ ಮಾಡುವಂತೆ ರಾಜ್ಯ ಸಂಸದರಿಗೆ ತಿಳಿಸಿದ್ದೇನೆ. ನಾನೂ ಕೂಡ ಶೀಘ್ರವೇ ಭೇಟಿ ಮಾಡಲಿದ್ದೇನೆ ಎಂದು ಹೇಳಿದ್ದಾರೆ.

