ಕಲಿಕಾ ಹಂತದಲ್ಲೇ ಗ್ರಾಹಕ ಹಕ್ಕುಗಳು, ವ್ಯವಹಾರಗಳ ಬಗ್ಗೆ ಅರಿವು ಮೂಡಿಸಿ

ಮೈಸೂರು: ವಿದ್ಯಾರ್ಥಿಗಳಿಗೆ ಕಲಿಕಾ ಹಂತದಲ್ಲೇ ಗ್ರಾಹಕ ಹಕ್ಕುಗಳು ಮತ್ತು ವ್ಯವಹಾರಗಳ ಬಗ್ಗೆ ಅರಿವು ಮೂಡಿಸಬೇಕೆಂದು ಪೋಷಕರು ಹಾಗೂ ಶಿಕ್ಷಕರಿಗೆ ರಾಜ್ಯ ಮುಕ್ತ ವಿವಿ ಅರ್ಥಶಾಸ್ತ್ರ ಸಂಶೋಧನಾ ಮತ್ತು ಅಧ್ಯಯನ ವಿಭಾಗದ ಅಧ್ಯಕ್ಷೆ ಪವಿತ್ರ ಆರ್‌. ಎಚ್.ಸಲಹೆ ನೀಡಿದರು.

ವಿದ್ಯಾರಣ್ಯ ಕೋಚಿಂಗ್ ಸೆಂಟರ್ ಆವರಣದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್, ಮೈಸೂರು ಘಟಕ ಏರ್ಪಡಿಸಿದ್ದ ಗ್ರಾಹಕ ಜಾಗರಣ ಪಾಕ್ಷಿಕ, ಗ್ರಾಹಕ ಹಕ್ಕುಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಗ್ರಾಹಕರ ಕಾಯ್ದೆಯನ್ನು ಅರಿತು ಅದರ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸಬೇಕು, ನೊಂದ ಗ್ರಾಹಕರು ನ್ಯಾಯ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಗ್ರಾಹಕರ ಹಕ್ಕುಗಳ ಕುರಿತು ವಿಶೇಷವಾದ ಜ್ಞಾನ ಹೊಂದಲು ಶಿಕ್ಷಕರು ಶ್ರಮಿಸಬೇಕು ಎಂದು ಹೇಳಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಮಾತನಾಡಿ, ವಸ್ತುಗಳ ಖರೀದಿಗೂ ಮುನ್ನ ಅದರಲ್ಲಿನ ನಿಬಂಧನೆ, ಶರತ್ತುಗಳನ್ನು ಓದುವ ತಾಳ್ಮೆಯೂ ನಮ್ಮಲ್ಲಿ ಇಲ್ಲದಂತಾಗಿದೆ ಎಂದು ತಿಳಿಸಿದರು.

ಇದರಿಂದಾಗಿ ಗ್ರಾಹಕರ ಶೋಷಣೆ ದ್ವಿಗುಣಗೊಳ್ಳುತ್ತಲೇ ಇದೆ. ವಂಚಿಸುವ ಸಂಸ್ಥೆಗಳನ್ನು ಶಿಕ್ಷಿಸಲು ಕಠಿಣ ಕಾನೂನಿನ ಅಗತ್ಯವಿದೆ ಎಂದು ಹೇಳಿದರು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಡಾ . ಜಿ.ವಿ ರವಿಶಂಕರ್ ಶೀಘ್ರವೇ ಶಾಲಾ-ಕಾಲೇಜುಗಳಲ್ಲಿ ಗ್ರಾಹಕರ ಕ್ಲಬ್ ಸ್ಥಾಪಿಸಿ ವಸ್ತುಗಳ ತೂಕ, ಅಳತೆಯಲ್ಲಿ ಮೋಸ ಹೋಗದಂತೆ ಸರಕನ್ನು ಯಾವ ರೀತಿ ಕೊಳ್ಳಬೇಕು ಎಂಬುದನ್ನು ತಿಳಿಸಿಕೊಡಲಾಗುವುದು ಎಂದು ಹೇಳಿದರು.

ಕೊಂಡ ವಸ್ತುಗಳು ಕಳಪೆ ಗುಣಮಟ್ಟ ಹಾಗೂ ದೋಷ ಪೂರ್ಣವೆಂದು ಕಂಡು ಬಂದಾಗ ಕೂಡಲೇ ಗ್ರಾಹಕ ಮಾಹಿತಿ ಕೇಂದ್ರಕ್ಕೆ ದೂರು ನೀಡುವ ಬಗ್ಗೆ ಹಾಗೂ ಗ್ರಾಹಕ ಸಂರಕ್ಷಣಾ ಕಾಯಿದೆ ಕುರಿತು ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಹಿರಿಯ ಸದಸ್ಯ ರಂಗನಾಥ್, ಕಾರ್ಯದರ್ಶಿ ರವಿಶಂಕರ್, ಚಕ್ರಪಾಣಿ, ಮಲ್ಲಿಕಾರ್ಜುನ ಸ್ವಾಮಿ ಮತ್ತಿತರರು ಹಾಜರಿದ್ದರು.