ಆನೆ ಬಲರಾಮನಿಗೆ ಗುಂಡೇಟು

ಮೈಸೂರು: ಸತತ 13 ವರ್ಷಗಳ ಕಾಲ ಅಂಬಾರಿ ಹೊತ್ತು ಮುನ್ನಡೆದಿದ್ದ ಬಲರಾಮನಿಗೆ ರೈತ ಗುಂಡು ಹಾರಿಸಿಬಿಟ್ಟಿದ್ದಾರೆ.

ಪಾಪ ಇದರಿಂದ‌ ಬಲರಾಮ ಗಾಯಗೊಂಡಿದ್ದಾನೆ.

ಕಾಡಾನೆ ಎಂದು ಭಾವಿಸಿ ರೈತ ಸುರೇಶ್ ಹಾರಿಸಿದ ಗುಂಡು ದಸರಾ ಆನೆಯ ಹೊಟ್ಟೆ ಭಾಗಕ್ಕೆ ತಗುಲಿದೆ.

ಅದೃಷ್ಟವಶಾತ್‌ ಬಲರಾಮ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಹುಣಸೂರು ವನ್ಯಜೀವಿ ವಲಯದ ಪಿರಿಯಾಪಟ್ಟಣ ತಾಲ್ಲೂಕಿನ ಅಳ್ಳೂರು ಬಳಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿ ಸುರೇಶ್‌ ನನ್ನು ಬಂಧಿಸಲಾಗಿದ್ದು, ಕೋರ್ಟ್‌ ನ್ಯಾಯಾಂಗ ಬಂಧನ ವಿಧಿಸಿದೆ.

ಗುರುವಾರ ಮೇಯಲು ಬಿಟ್ಟ ಆನೆ ಶಿಬಿರಕ್ಕೆ ಮರಳಿರಲಿಲ್ಲ. ಹುಡುಕಿಕೊಂಡು ಹೋದಾಗ ಬಲರಾಮ ಗಾಯಗೊಂಡು ಒದ್ದಾಡುತ್ತಿದ್ದ.

ತಕ್ಷಣ ಆನೆಯನ್ನು ಭೀಮನಕಟ್ಟೆ ಶಿಬಿರಕ್ಕೆ ಕರೆ ತಂದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

ಕಾಡತೂಸು ಬಳಸಿ ಗುಂಡು ಹಾರಿಸಲಾಗಿದ್ದು ಬಲರಾಮನ ಹೊಟ್ಟೆಯ ಭಾಗಕ್ಕೆ ಗುಂಡೇಟು ತಗುಲಿದೆ. ಗುಂಡಿನ ಭಾಗಗಳನ್ನು ದೇಹದಿಂದ ತೆಗೆಯಲಾಗಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮತ್ತಿಗೋಡು ಶಿಬಿರದಲ್ಲಿದ್ದ ಗೋಪಾಲಸ್ವಾಮಿ ಹೆಸರಿನ ಆನೆ ಕಳೆದ ತಿಂಗಳು (ನ. 23) ಕಾಡಾನೆ ದಾಳಿಯಿಂದ ಮೃತಪಟ್ಟಿದ್ದು ಈಗ ಈ ದುರ್ಘಟನೆ ಸಂಭವಿಸಿರುವುದರಿಂದ ಪ್ರಾಣಿಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.

ಅತ್ಯಂತ ಶಾಂತ ಸ್ವಭಾವದ 64 ವರ್ಷ ವಯಸ್ಸಿನ ಬಲರಾಮ ಈ ಬಾರಿಯೂ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿತ್ತು.

ದ್ರೋಣನ ಸಾವಿನ ಬಳಿಕ ಮೊದಲ ಬಾರಿ ಅರ್ಜುನ ಅಂಬಾರಿ ಹೊತ್ತು ನಡೆದಿದ್ದ. ಆದರೆ ಮಾವುತನನ್ನು ಸಾಯಿಸಿದ ಹಿನ್ನೆಲೆಯಲ್ಲಿ ಅರ್ಜುನನ ಬದಲು ಬಲರಾಮನಿಗೆ ಈ ಜವಾಬ್ದಾರಿ ಹೊರಿಸಲಾಗಿತ್ತು.

ಬಲಗಣ್ಣಿನ ದೋಷವಿದ್ದರೂ ಬಲರಾಮ13 ವರ್ಷಗಳ ಕಾಲ ಯಶಸ್ವಿಯಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದಾನೆ.

ವಯಸ್ಸಿನ ಕಾರಣಕ್ಕೆ ಅಂಬಾರಿ ಹೊಣೆಯಿಂದ ವಿಮುಕ್ತನಾದರೂ ಬಲರಾಮ ಈಗಲೂ ದಸರಾ ಗಜಪಡೆಯ ಕಾಯಂ ಸದಸ್ಯನಾಗಿ ಮುಂದುವರಿದಿದ್ದಾನೆ.