ಬೆಂಗಳೂರು: ಎಲ್ಲಾ ಜನತೆ ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಂಡು ಕೊರೊನಾ ತಡೆಯಲು ಸಹಕರಿಸುವಂತೆ ಆರೋಗ್ಯ ಸಚಿವ ಡಾ.ಸುಧಾಕರ್ ಮನವಿ ಮಾಡಿದ್ದಾರೆ.
ಕೇಂದ್ರ ಆರೋಗ್ಯ ಸಚಿವರು ನಡೆಸಿದ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ವಿಡಿಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡ ಬಳಿಕ ಅವರು ಮಾತನಾಡಿದರು.
ಆಕ್ಸಿಜನ್ ಪ್ಲಾಂಟ್, ಆಕ್ಸಿಜನ್ ಜನರೇಟರ್, ಕೋವಿಡ್ ಉಪಕರಣಗಳು, ಇತರೆ ವ್ಯವಸ್ಥೆ ಪರಿಶೀಲಿಸಲು ಡಿ 27ರಂದು ಎಲ್ಲಾ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿದಿನ ವಿಶ್ವದಲ್ಲಿ 5ರಿಂದ 10ಲಕ್ಷ ಕೇಸ್‌ಗಳು ಪತ್ತೆಯಾಗುತ್ತಿವೆ. ಈ ಪೈಕಿ ಚೀನಾ, ಜಪಾನ್, ತೈವಾನ್, ಅಮೆರಿಕಾ, ಯುರೋಪ್, ನ್ಯೂಜಿಲೆಂಡ್ ಸೇರಿದಂತೆ ಶೇ.80 ರಷ್ಟು ಹೊಸ ಕೇಸ್‌ಗಳು ಕಾಣಿಸಿಕೊಳ್ಳುತ್ತಿದೆ ಎಂದು ತಿಳಿಸಿದರು.
ಸದ್ಯ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 0.03% ರಷ್ಟು ಇದೆ. ಭಾರತದಲ್ಲಿ ಎರಡು ಡೋಸ್‌ಗಳ ಲಸಿಕಾಕರಣ ಆಗಿರುವುದು ಇದಕ್ಕೆ ದೊಡ್ಡ ಕಾರಣವಾಗಿದೆ ಎಂದು ಹೇಳಿದಸುದ್ದಿಜೊತೆಗೆ ನಮ್ಮ ಜನರಲ್ಲಿ ಸ್ವಾಭಾವಿಕವಾದಂತಹ ರೋಗ ನಿರೋಧಕ ಶಕ್ತಿಯೂ ಒಂದು ಕಾರಣವಾಗಿರಬಹುದು.
ವಿದೇಶಗಳಿಗೆ ಹೋಲಿಕೆ ಮಾಡಿದಾಗ ಕೊರೊನಾ ನಿಯಂತ್ರಣದ ಬಗ್ಗೆ ನಮ್ಮ ದೇಶದ ಜನ ಹೆಚ್ಚು ಒಲವು ತೋರಿರುವುದು ಕಂಡು ಬಂದಿದೆ ಎಂದು ತಿಳಿಸಿದರು.
ಅಮೆರಿಕಾದ ಸಂಸ್ಥೆಯೊಂದು ಮಾಡಿರುವ ವರದಿ ಪ್ರಕಾರ ಮುಂದಿನ ವರ್ಷದಲ್ಲಿ ಚೀನಾ ಒಂದರಲ್ಲೇ 10 ಲಕ್ಷ ಜನರು ಕೊರೊನಾದಿಂದ ಸಾವನ್ನಪ್ಪುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ರಾಜ್ಯ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ, ನಮ್ಮ ರಾಜ್ಯದ ವತಿಯಿಂದಲೂ ಕೆಲವು ಸಲಹೆ ನೀಡಲಾಯಿತು ಎಂದರು.
ಜನರು ಹೆಚ್ಚು ಜಾಗೃತೆಯಿಂದ ಇರಬೇಕು, ಬೂಸ್ಟರ್ ಡೋಸ್‌ಗಳನ್ನು ಬೇಗನೆ ಪಡೆದುಕೊಳ್ಳಬೇಕು ಎಂದು ಸುಧಾಕರ್ ವಿನಂತಿಸಿದರು.
ಕೊರೊನಾ ರೂಪಾಂತರ ತಳಿ BF07 R ವ್ಯಾಲ್ಯೂ ಪ್ರಕಾರ ಒಬ್ಬ ವ್ಯಕ್ತಿಯಿಂದ 17-18 ಜನಕ್ಕೆ ಹರಡುವ ಸಾಮರ್ಥ್ಯ ಹೊಂದಿದೆ.
ಟೆಸ್ಟಿಂಗ್, ಕಣ್ಗಾವಲು ಹೆಚ್ಚಿಸಲು ಕೂಡ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ರಾಜ್ಯದಲ್ಲಿ 8 ರಿಂದ 10 ಲಕ್ಷ ಲಸಿಕೆಗಳಿದ್ದು ಜನರು ಸ್ವಯಂ ಪ್ರೇರಿತರಾಗಿ ಇದನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.
ಹಿರಿಯರಿಗೆ ಪ್ರಾಶಸ್ತ್ಯ ನೀಡಿ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಮಾಸ್ಕ್ ಸೇರಿದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಜನರು ಕೈಗೊಳ್ಳಬೇಕು.
ಹೊಸ ವರ್ಷ ಸೇರಿದಂತೆ ಹೆಚ್ಚು ಜನರು ಸೇರುವ ಕಡೆ ಸಮಾರಂಭಗಳನ್ನು ಆಯೋಜಿಸುವುದನ್ನು ಕೆಲ ದಿನಗಳ ಕಾಲ ಮುಂದೂಡುವುದು ಉತ್ತಮ ಎಂದು ಸಚಿವರು ಸಲಹೆ ನೀಡಿದರು.

