ಮೈಸೂರು: ಸ್ಯಾಂಟ್ರೊ ರವಿ ಮೇಲೆ ಕೇಳಿ ಬಂದಿರುವ ಆರೋಪಗಳ ಕುರಿತು ಸಂಪೂರ್ಣ ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಸಿಎಂ ಮಾತನಾಡಿದರು.
ಸ್ಯಾಂಟ್ರೋ ರವಿ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ರೌಡಿ ಚಟುವಟಿಕೆ ಸೇರಿದಂತೆ 20 ವರ್ಷಗಳ ಹಿಂದಿನ ಪ್ರಕರಣಗಳನ್ನು ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು.
ಕಾನೂನಿಗಿಂತ ಯಾರೂ ಕೂಡ ದೊಡ್ಡವರಲ್ಲ ಆತನೊಂದಿಗೆ 20 ವರ್ಷಗಳಿಂದ ಯಾವ ರಾಜಕಾರಣಿಗಳು ಸಂಪರ್ಕದಲ್ಲಿದ್ದರೋ ಅದೆಲ್ಲವೂ ಹೊರಬರಬೇಕಿದೆ ಎಂದು ಸಿಎಂ ತಿಳಿಸಿದರು.
ಮೈಸೂರು ಪೊಲೀಸರಿಗೆ ಆತನ ಕುರಿತು ಸಂಪೂರ್ಣ ತನಿಖೆ ನಡೆಸುವಂತೆ ಸೂಚಿಸಿದ್ದೇನೆ,ಪೊಲೀಸರು ಅವನನ್ನು ಬಂಧಿಸಲು ಕಾರ್ಯಾನ್ಮುಖರಾಗಿದ್ದಾರೆ ಎಂದು ತಿಳಿಸಿದರು.
ಸ್ಯಾಂಟ್ರೋ ರವಿ ಕೇವಲ ಬಿಜೆಪಿ ನಾಯಕರ ಜತೆ ಸಂಪರ್ಕದಲ್ಲಿಲ್ಲ. ಆತ ವಿರೋಧ ಪಕ್ಷಗಳ ನಾಯಕರ ಜತೆಯೂ ಸಂಪರ್ಕದಲ್ಲಿದ್ದಾನೆ.
ಹಾಗಾಗಿ ತನಿಖೆ ನಡೆಸಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಯಾರೇ ಇರಲಿ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ.ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎನ್ನುವ ಪ್ರಶ್ನೆ ಬೇಡ. ಕಾನೂನು ಬಾಹಿರ ಚಟುವಟಿಕೆ ಯಾರೇ ನಡೆಸಿದ್ದರೂ ಅದು ತಪ್ಪೇನೆ.
ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಪ್ರತಿಪಕ್ಷಗಳ ನಾಯಕರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರ ಎಂದು ಹೇಳಿದರು.
ಸ್ಯಾಂಟ್ರೋ ರವಿ ಜತೆ ಫೋಟೋಗಳು, ಆತನಿಗೆ ಕರೆ ಮಾಡಿರುವ ದೂರವಾಣಿ ಕರೆಗಳು ನಕಲಿ. ಕುಮಾರ ಕೃಪದಲ್ಲಿ ಆತನ ಜತೆ ವರ್ಗಾವಣೆಯಲ್ಲಿ ಶಾಮೀಲಾಗಿದ್ದಾರೆ ಎಂಬುದೆಲ್ಲ ಸತ್ಯಕ್ಕೆ ದೂರವಾದುದು ಎಂದು ಸಿಎಂ ಸ್ಪಷ್ಟಪಡಿಸಿದರು.
ಆತ ಹಲವಾರು ವರ್ಷಗಳಿಂದಲೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂಬುದರ ಕುರಿತು ತನಿಖೆ ನಡೆಸುತ್ತೇವೆ. ನನ್ನ ಮಗನ ಜತೆ ಆತ ಎಲ್ಲಿಯೂ ಮಾತುಕತೆ ನಡೆಸಿಲ್ಲ.
ವಿಧಾನಸೌಧದ ಬಳಿ ಲೋಕಾಯುಕ್ತ ಇಂಜಿನಿಯರ್ ಬಳಿ ಹಣ ಸಿಕ್ಕ ಪ್ರಕರಣ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಸಿಎಂ ತಿಳಿಸಿದರು.
ಹಿಂದೆ ಕಾಂಗ್ರೆಸ್ ಸರ್ಕಾರದ ಅವಯಲ್ಲಿ ಸಚಿವ ಪುಟ್ಟರಂಗಶೆಟ್ಟಿ ಕಚೇರಿಯಲ್ಲಿ 22 ಲಕ್ಷ ನಗದು ಸಿಕ್ಕಿತ್ತು. ಎಸಿಬಿ ಕೊಟ್ಟು ಕೊನೆಗೆ ಪ್ರಕರಣವನ್ನೇ ಕಾಂಗ್ರೆಸ್‍ನವರು ಮುಚ್ಚಿ ಹಾಕಿದರು ಎಂದು ಬೊಮ್ಮಾಯಿ ಕಿಡಿಕಾರಿದರು.

