ಸ್ಯಾಂಟ್ರೋ ರವಿ ವಿಚಾರಣೆ

ಮೈಸೂರು, . 14- ಸಿನಿಮೀಯ ರೀತಿಯಲ್ಲಿ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋರವಿ(51) ಯನ್ನು ನಿನ್ನೆ ಗುಜರಾತ್ ನಲ್ಲಿ ಬಂಧಿಸಿದ್ದ ಮೈಸೂರು ಪೊಲೀಸರು ಇಂದು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ನಿನ್ನೆ ಮಧ್ಯ ರಾತ್ರಿಯಲ್ಲೇ ಸ್ಯಾಂಟ್ರೋ ರವಿಯನ್ನು ಮೈಸೂರಿಗೆ ಕರೆ ತಂದಿದ್ದ ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.

ವಿಚಾರಣೆ ನಂತರ ನ್ಯಾಯಾಧೀಶರ ಮುಂದೆ ಸ್ಯಾಂಟ್ರೋ ರವಿಯನ್ನು ಹಾಜರುಪಡಿಸಲಿದ್ದಾರೆ.

ಗುಜರಾತ್ ಅಹಮದಾಬಾದ್ ನಲ್ಲಿ ಮಂಜುನಾಥ್ ಕೆ. ಎಸ್ ಅಲಿಯಾಸ್ ಸ್ಯಾಂಟ್ರೋರವಿ (51),ರಾಮ್ ಜೀ (45),ಸತೀಶ್ ಕುಮಾರ್ (35) ಹಾಗೂ ಮಧುಸೂದನ್ ಅಲಿಯಾಸ್ ಮಧು ಎಂಬವರನ್ನು ಬಂಧಿಸಲಾಗಿತ್ತು.

ವಿಷಯವನ್ನು ನಿನ್ನೆ ಸಂಜೆಯೇ ಸುದ್ದಿಗೋಷ್ಠಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದರು.

ಸ್ಯಾಂಟ್ರೋ ರವಿ ಬಂಧನ ಆಗಿದೆ. ನಮ್ಮ ತಂಡಗಳು ಹಾಗೂ ಹೊರ ರಾಜ್ಯಗಳ ತಂಡಗಳು ಆತನನ್ನು ಹಿಡಿಯಲು

ಕೇರಳ, ತೆಲಂಗಾಣ, ಮಹಾರಾಷ್ಟ್ರಕ್ಕೆ ಹೋಗಿದ್ದೆವು. ಗುಜರಾತ್ ಪೊಲೀಸರ ಸಹಕಾರದಿಂದ ಮಂಜುನಾಥ್ ನನ್ನು ಬಂಧಿಸಲಾಗಿದೆ ಎಂದು ಹೇಳಿದರು.

ನಾಲ್ಕು ದಿನದಿಂದ ಮಂಡ್ಯ ಎಸ್ಪಿ ಯತೀಶ್, ರಾಮನಗರ ಎಸ್ಪಿ ಸಂತೋಷ್ ಬಾಬು, ರಾಯಚೂರು ಎಸ್ಪಿ ನಿಖಿಲ್ ನಮ್ಮೊಂದಿಗೆ ಇದ್ದು ಆರೋಪಿಗಳ ಬಂಧನಕ್ಕೆ ಸಹಕರಿಸಿದ್ದಾರೆ ಎಂದು ತಿಳಿಸಿದರು.

ಇನ್ಸ್ಪೆಕ್ಟರ್ಗಳಾದ ಅಝರುದ್ದೀನ್, ದಿವಾಕರ್  ಸುಮಾರು 1500 ಕಿ.ಮೀ.    ಚೇಸ್ ಮಾಡಿ ಸ್ಯಾಂಟ್ರೋ ರವಿಯನ್ನು ಹಿಡಿದರೆಂದು ಹೇಳಿದರು.

ಸ್ಯಾಂಟ್ರೋ ರವಿ ಕ್ರಿಮಿನಲ್ ಮೈಂಡ್ ಹೊಂದಿದ್ದಾನೆ.ಅಹ್ಮದಬಾದ್ನಲ್ಲಿ ನಾಲ್ಕು ಆರೋಪಿಗಳನ್ನು ಬಂಧಿಸಿ,

ಅಲ್ಲಿನ ನ್ಯಾಯಾಲಯಕ್ಕೆ ಹಾಜರು ಪಡಿಸಿಯೇ ಮೈಸೂರಿಗೆ ಕರೆತರಲಾಗಿದೆ.

ದೇಶದ ಹಲವು ರಾಜ್ಯಗಳಲ್ಲಿ ಸಂಚರಿಸಿರುವ ಸ್ಯಾಂಟ್ರೋರವಿ ಬಂಧನಕ್ಕಾಗಿ ಹಲವು ತಂಡಗಳನ್ನು ರಚಿಸಲಾಗಿತ್ತು.

ಆತ ಪ್ರತಿನಿತ್ಯ ಜಾಗ ಬದಲಾಯಿಸುವುದರ ಜೊತೆಗೆ, ಕಾರು, ಸಿಮ್ ಕಾರ್ಡ್ ಬದಲಾಯಿಸುತ್ತಿದ್ದುದರಿಂದ ಆತನನ್ನು ಬಂಧಿಸಲು ಇಷ್ಟು ದಿನಗಳಾಯಿತು ಎಂದು ಅಲೋಕ್ ಕುಮಾರ್ ವಿವರ ನೀಡಿದ್ದರು.