ಭಾರತ ಇಂದು ಎಲ್ಲಾ ರಂಗಗಳಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದೆ -ಮೋದಿ

ಕೊಡಕಲ್ (ಯಾದಗಿರಿ): ಯಾದಗಿರಿ ಜಿಲ್ಲೆಗೆ ಸಮೃದ್ಧ ಇತಿಹಾಸವಿದೆ, ಇದು ನಮ್ಮ ಪೂರ್ವಜರ ಸಾಮರ್ಥ್ಯದ ಪ್ರತೀಕವಾಗಿದೆ ಎಂದು ಪ್ರಧಾಮ ಮಂತ್ರಿ ನರೇಂದ್ರ ಮೋದಿ ತಿಳಿಸಿದರು.

ಯಾದಗಿರಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆ ಗಳಿಗೆ ಚಾಲನೆ ನೀಡಿ ಪ್ರಧಾನಿಗಳು ಮಾತನಾಡಿದರು.

ಕರ್ನಾಟಕದಲ್ಲಿನ ಎಲ್ಲ ಸಹೋದರ ಸಹೋದರಿಯರಿಗೆ ನನ್ನ ವಂದನೆಗಳು ಎಂದು ಕೈ ಮುಗಿದು ಕನ್ನಡದಲ್ಲಿ ಭಾಷ| ಆರಂಭಿಸಿದ ಮೋದಿ, ನಾವು ವಿಕಾಸದ ಮೂಲಕ ಜನರ ವೋಟ್ ಬ್ಯಾಂಕ್ ನೋಡುತ್ತೇವೆ ಎಂದು ತಿಳಿಸಿದರು.

ನಾಡಿನಲ್ಲಿ ಸಂಸ್ಕೃತಿ, ಪರಂಪರೆ ಇದೆ, ಸುರಪುರದ ಮಹಾನ್ ರಾಜ ವೆಂಕಟಪ್ಪ ನಾಯಕ ತಮ್ಮ ಆಡಳಿತದಿಂದ ದೇಶದಲ್ಲಿ ಖ್ಯಾತಿ ಗಳಿಸಿದ್ದರು ಎಂದು ಹೇಳಿದರು.

ಕರ್ನಾಟಕದ ವಿಕಾಸಕ್ಕಾಗಿ 10 ಸಾವಿರ ಕೋಟಿ ರೂಪಾಯಿಗೂ ಅಧಿಕ ಯೋಜನೆಗೆ ಶಿಲಾನ್ಯಾಸ, ಶಂಕುಸ್ಥಾಪನೆಗೆ ನಾನು ಬಂದಿದ್ದೇನೆ. ಯೋಜನೆಯಿಂದ ಯಾದಗಿರಿ, ಕಲಬುರಗಿ, ವಿಜಯಪುರ, ರಾಯಚೂರು ಜಿಲ್ಲೆಗಳ ಜನತೆಗೆ ನೀರಾವರಿ, ಕುಡಿಯುವ ನೀರಿಗೆ ಸಾಕಷ್ಟು ಉಪಯೋಗವಾಗಲಿದೆ ಎಂದು ತಿಳಿಸಿದರು.

ಇದರಿಂದ ಜನರ ಜೀವನ ಮಟ್ಟ ಸುಧಾರಿಸಲಿದೆ, ಉದ್ಯೋಗ ಪ್ರಮಾಣ ಹೆಚ್ಚಾಗಲಿದೆ. ಒಟ್ಟಾರೆ ಜಿಲ್ಲೆಗಳ ವಿಕಾಸವಾಗಲಿದೆ ಎಂದು ಮೋದಿ ಹೇಳಿದರು.

ಯೋಜನೆ ಆರಂಭ ಮಾಡಿರುವುದಕ್ಕೆ ನಾನು ಸಿಎಂ ಬೊಮ್ಮಾಯಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

ಭಾರತ ಇಂದು ಎಲ್ಲಾ ರಂಗಗಳಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದೆ. ಮುಂದಿನ 25 ವರ್ಷಗಳಲ್ಲಿ ಭಾರತ ಅಮೃತ ಸಮಯವನ್ನು ಕಾಣಲಿದೆ.

ಇದರಲ್ಲಿ ಕರ್ನಾಟಕದ ಕೊಡುಗೆಯೂ ಸಾಕಷ್ಟಿದೆ.ಇದಕ್ಕೆ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಪ್ರಧಾನಿ ಕರೆ ನೀಡಿದರು.