ಮೈಸೂರು: ಪ್ರತಿಯೊಬ್ಬ ಮತದಾರರು ನನ್ನ ಮತ ಮಾರಾಟಕ್ಕೆ ಇಲ್ಲ ಎಂಬ ತತ್ವಕ್ಕೆ ಬದ್ದರಾಗಿ ಮತ ಚಲಾಯಿಸಬೇಕು ಆಗ ಮಾತ್ರ ಚುನಾವಣಾ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಸಾಧ್ಯ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಕರ್ನಾಟಕ ಕಲಾಮಂದಿರದಲ್ಲಿ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಕುರಿತು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ಮೈಸೂರು ಜಗತ್ ಪ್ರಸಿದ್ಧ ಐತಿಹಾಸಿಕ ಸ್ಥಳವಾಗಿದೆ. ಇಡೀ ಜಗತ್ತಿಗೆ ಪ್ರಜಾ ಪ್ರಭುತ್ವದ ಬುನಾದಿಯನ್ನು ಬಸವಣ್ಣ ನವರ ಅನುಭವ ಮಂಟಪ ಹಾಕಿಕೊಟ್ಟಿತು, 1881 ರಲ್ಲೆ ಮೈಸೂರು ಮಹಾರಾಜರು ಪ್ರಜಾ ಪ್ರಭುತ್ವದ ಬುನಾದಿ ಹಾಕಿಕೊಟ್ಟರು ಎಂದು ಹೇಳಿದರು.
ನಮಗೆ ಸ್ವಾತಂತ್ರ್ಯ ಬಂದು 75 ವರ್ಷ ಆಯಿತು. ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹನೀಯರ ಸಾಧನೆ ಅಪಾರ.
ಸ್ವಾತಂತ್ರ್ಯ ಬಂದಾಗ ನಮಗೆ ಆಹಾರ ಕೊರತೆ ಇತ್ತು. ವಿದೇಶದಿಂದ ಆಹಾರ ತರಿಸಲಾಗುತ್ತಿತ್ತು. ಆದರೆ ಇಂದು ಆಹಾರದ ಸ್ವಾವಲಂಬನೆ ಸಾಧಿಸಿದ್ದೇವೆ. ಇದಕ್ಕೆ ಕಾರಣ ನಮ್ಮ ರೈತರು ಎಂದು ಹೇಳಿದರು.
ಸ್ವಾತಂತ್ರ್ಯ ಬಂದಾಗ 299 ರೂ ತಲಾ ಆದಾಯ ಇತ್ತು ಇಂದು 1,18, 235 ಇದೆ. ಇಂದು 35 ಉಪಗ್ರಹಗಳನ್ನು ಏಕಕಾಲದಲ್ಲಿ ಹಾರಿಸುವ ಸಾಮರ್ಥ್ಯ ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಚಂದ್ರನ ಮೇಲೂ ಕಾಲಿಡುತ್ತೇವೆ.
ನಮ್ಮ ದೇಶದ ಸೈನ್ಯ ಬಲಿಷ್ಟ ವಾಗಿದೆ. ಆರೋಗ್ಯ ಕ್ಷೇತ್ರ ಉತ್ತಮವಾಗಿದೆ, ಕರೋನಾ ಸಂದರ್ಭದಲ್ಲಿ ಲಸಿಕೆ ಕಂಡು ಹಿಡಿದು ನಮ್ಮ ದೇಶದ ಪ್ರಜೆಗಳಿಗೆ ಮಾತ್ರವಲ್ಲದೆ ಹೊರ ದೇಶಗಳಿಗೂ ಲಸಿಕೆ ಪೂರೈಕೆ ಮಾಡಲಾಗಿದೆ. ಜಿ20 ದೇಶಗಳ ಅಧ್ಯಕ್ಷತೆ ವಹಿಸಿ ಕೊಳ್ಳುವ ಕಾಲ ಬಂದಿದೆ ಎಂದು ಕಾಗೇರಿ ತಿಳಿಸಿದರು.
ಚುನಾವಣೆಗಳು ಇಂದು ಹಣ, ಹೆಂಡದ ಮೇಲೆ ನಡೆಯುತ್ತಿವೆ. ಇದಕ್ಕೆ ಸಂವಿಧಾನಬದ್ಧ ಸಂಸ್ಥೆಗಳು ಹಾಗೂ ಜನರು ಕಾರಣರಾಗಿದ್ದಾರೆ.
ಕಾರ್ಯಾಂಗದಲ್ಲಿ ಇರುವ ಜಟಿಲತೆ ಹಾಗೂ ಅಧಿಕಾರಿಗಳ ಕಾರ್ಯವೈಖರಿಯಿಂದ ಜನರು ತತ್ತರಿಸುತ್ತಿದ್ದಾರೆ. ಸರ್ಕಾರದ 3 ಅಂಗಗಳಲ್ಲಿಯೂ ಲೋಪಗಳು ಕಂಡುಬರುತ್ತಿವೆ ಎಂದು ಸ್ಪೀಕರ್ ಬೇಸರ ವ್ಯಕ್ತಪಡಿಸಿದರು.
ನನ್ನ ಮತ ಮಾರಾಟಕ್ಕೆ ಇಲ್ಲ ಎಂಬ ತತ್ವಕ್ಕೆ ಪ್ರತಿಯೊಬ್ಬರೂ ಬದ್ಧವಾಗಿರಬೇಕು. ಇದು ಅಭಿಯಾನದ ರೀತಿ ಜಾರಿಯಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ನಾಗೇಂದ್ರ, ತನ್ವೀರ್ ಸೇಠ್, ಮಹಾ ಪೌರರದ ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ, ಉಪ ಮಹಾ ಪೌರರಾದ ರೂಪ, ಮಹಾ ನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

