ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 74ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಕರ್ತವ್ಯಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಯದೀಪ್ ಧನಕರ್ ಸಾಥ್ ನೀಡಿದರು.
ನಂತರ ನಡೆದ ಭವ್ಯ ಮೆರವಣಿಗೆ ಎಲ್ಲರ ಮನಸೂರೆಗೊಂಡಿತು.
ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್–ಸಿಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ವಿಶೇಷ.
ಧ್ವಜಾರೋಹಣ ನಂತರ ರಾಷ್ಟ್ರಪತಿಗಳಿಗೆ 21 ತೋಪಿನ ಸನ್ಮಾನ ನೀಡಿ ಗೌರವಿಸಲಾಯಿತು.
ರಾಜಪಥ್ ಕರ್ತವ್ಯಪಥ ಎಂದು ಮರುನಾಮಕರಣಗೊಂಡ ಬಳಿಕ ನಡೆಯುತ್ತಿರುವ ಮೊದಲ ಗಣರಾಜ್ಯೋತ್ಸವ ಇದು.
ಪರೇಡ್ ಮೂಲಕ ವಿಶ್ವದ ಮುಂದೆ ದೇಶದ ಶಕ್ತಿ ಕರ್ತವ್ಯಪಥದಲ್ಲಿ ಮೊದಲ ಬಾರಿಗೆ ಅನಾವರಣವಾಗಿದ್ದು ಮೈನವಿರೇಳುವಂತೆ ಮಾಡಿತು.
ಇದೇ ಮೊದಲ ಬಾರಿಗೆ ಈಜಿಪ್ಟ್ ಸೇನಾಪಡೆಗಳು ಕೂಡ ಗಣರಾಜ್ಯೋತ್ಸವದ ಪರೇಡ್ನಲ್ಲಿ ಭಾಗಿಯಾಗಿದ್ದುದು ಇನ್ನೂ ವಿಶೇಷ.
ಕರ್ತವ್ಯಪಥದಲ್ಲಿ ಮೂರು ಪಡೆಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ವಂದನೆ ಸಲ್ಲಿಸಿದವು.
ವಾಯುಪಡೆ ತಂಡದಿಂದ ಆಕಾಶ್ ಮಿಸೈಲ್, ಏರ್ ಡಿಫೆನ್ಸ್ ತಂಡ, ಬ್ರಿಡ್ಜ್ ಎಂಜಿನಿಯರಿಂಗ್ ತಂಡ, ಬ್ರಹ್ಮೋಸ್-861 ಮಿಸೈಲ್ ತಂಡ, ಕೆ9 ವಜ್ರಾ ಟ್ಯಾಂಕ್ ಗ್ರೂಪ್ ತಂಡ, ಕ್ವಿಕ್ ರೆಸ್ಪಾನ್ಸ್ ಲಡಾಖ್ ಸ್ಕೌಟ್ ತಂಡ, ಬಿಎಂಪಿ ಸಾರಥ್ ಇನ್ಫೆಂಟ್ರಿ ತಂಡ, ನಾಗಾ ಮಿಸೈಲ್ ಸಿಸ್ಟಂ ತಂಡದಿಂದ ಪರೇಡ್ ನಡೆಯಿತು.
ಕರ್ತವ್ಯಪಥದಲ್ಲಿ ನಡೆದ ಪಥಸಂಚಲನದಲ್ಲಿ ಆತ್ಮ ನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ನಿರ್ಮಾಣವಾದ ಅರ್ಜುನ್ ಟ್ಯಾಂಕ್, ನಾಗ್ ಮಿಸೈಲ್ ಸಿಸ್ಟಮ್, ಕೆ9 ವಜ್ರ ಮತ್ತು ಆಕಾಶ್ ವೆಪನ್ ಸಿಸ್ಟಮ್ ಅನ್ನು ಭಾರತೀಯ ಸೇನೆ ಪ್ರದರ್ಶಿಸಿತು.
ಹುತಾತ್ಮ ಯೋಧರ ನೆನಪಿಗಾಗಿ ಕಟ್ಟಿಸಿರುವ ಅಮರ್ ಜವಾಬ್ ಜ್ಯೋತಿಯಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, 3 ಸೇನಾ ಮುಖ್ಯಸ್ಥರು ಗೌರವ ನಮನ ಸಲ್ಲಿಸಿದರು.

