ನಾಡಿನ ಜನತೆಗೆ ಶುಭ ಕೋರಿದ ಗೆಹ್ಲೋಟ್

ಬೆಂಗಳೂರು: 74ನೇ ಗಣರಾಜ್ಯೋತ್ಸವದ ಪ್ರಯುಕ್ತ ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್​​ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದರು.

ನಂರ ಅವರು ಗೌರವ ವಂದನೆ ಸ್ವೀಕರಿಸಿ, ಜನತೆಯನ್ನುದ್ದೇಶಿಸಿ ಮಾತನಾಡಿದರು.

ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಜ್ಯಪಾಲರು, ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದರು.

ಬಳಿಕ ನಾವೆಲ್ಲರೂ ಸೇರಿ ಕರ್ನಾಟಕ ರಾಜ್ಯವನ್ನು ಸ್ವಸ್ಥ ಮತ್ತು ಸಮೃದ್ಧವಾಗಿಸೋಣ ಹಾಗೂ ದೇಶದ ಸಾರ್ವಭೌಮತ್ವ ಏಕತೆ ಮತ್ತು ಅಖಂಡತೆಯನ್ನು ಬಲಿಷ್ಠಗೊಳಿಸುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

ದೇಶದ ಪ್ರಗತಿಪರ ರಾಜ್ಯಗಳಲ್ಲಿ  ಕರ್ನಾಟಕವು ಒಂದಾಗಿದೆ. ರಾಜ್ಯದ ಸರ್ವಾಂಗೀಣ ನಿರಂತರ ಅಭಿವೃದ್ಧಿ ಉದ್ದೇಶದೊಂದಿಗೆ ಮೂಲಭೂತ ಸೇವೆಗಳನ್ನು ಒದಗಿಸಲು ವಿಭಿನ್ನ, ನವೀನ ಮತ್ತು ಸರ್ವರನ್ನು ಒಳಗೊಂಡ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ನಾವು ಅಗ್ರಗಣ್ಯ ಸ್ಥಾನದಲ್ಲಿದ್ದೇವೆ ಎಂದು ಗೆಹ್ಲೋಟ್ ಪ್ರಶಂಸೆ ವ್ಯಕ್ತಪಡಿಸಿದರು.