ಮೈಸೂರು: ಕಳೆದ ಬಾರಿ ಕೂಡಾ ಜನಪರ ಬಜೆಟ್ ಕೊಟ್ಟಿದ್ದೆವು. ಈ ಬಾರಿಯೂ ಸಹಾ ಜನಪರವಾಗಿಯೇ ಇರಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ,ಇನ್ನೇನು ಚುನಾವಣೆ ಎದುರಾಗಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ.ಹಾಗೇಯೇ ಇದು ಚಾನಾವಣಾ ಬಜೆಟ್ ಎಂದೇ ತಿಳಿಯುವುದರಿಂದ ಖಂಡಿತಾ ಜನಪರ ಬಜೆಟ್ ಆಗಿರಲಿದೆ ಎಂದು ಹೇಳಿದರು.
ಮೈಸೂರಿಗೆ ಏನೇನು ನಿರೀಕ್ಷಿಸ ಬಹುದು ಎಂಬ ಮಾಧ್ಯಮದವರ ಪ್ರಶ್ನೆಗೆ ಮೈಸೂರು ಅತ್ಯಂತ ಪ್ರಮುಖವಾದ ಜಿಲ್ಲೆ ಆದರೆ ಇಡೀ ಕರ್ನಾಟಕವೇ ಬಜೆಟ್ ಬಗ್ಗೆ ಹೆಚ್ಚು ನಿರೀಕ್ಷೆ ಮಾಡುತ್ತಿದೆ ಎಂದು ಸಿಎಂ ಉತ್ತರಿಸಿದರು.
ಮೈಸೂರಿನಲ್ಲಿ ಚಿರತೆ ಟಾಸ್ಕ್ ಫೋರ್ಸ್ ಮಾಡಿದ ಹಾಗೆ ಇಡೀ ರಾಜ್ಯಕ್ಕೆ ವಿಸ್ತರಿಸುವಿರಾ ಎಂಬ ಮತ್ತೊಂದು ಪ್ರಶ್ನೆಗೆ ಮೊದಲು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇವೆ ಎಂದು ಹೇಳಿದರು.
ಕಾಡಂಚಿನ ಜನರಿಗೆ ಮೊದಲು ದೈರ್ಯ ತುಂಬುವ ಕೆಲಸ ಮಾಡಲಾಗುವುದು.ಆನೆ,ಚಿರತೆ ದಾಳಿ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಾದಿ ಭಾಗ್ಯ ಮುಂದುವರಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರಲ್ಲ ಎಂದು ಕೇಳಿದ್ದಕ್ಕೆ ಸಿಎಂ ಆಗಿ ಶಾದಿ ಭಾಗ್ಯ ಮಾಡಿದರು ಅದು ಅವರ ಪಕ್ಷದ ದೌರ್ಭಾಗ್ಯ ಅವರು ಏನು ಬೇಕಾದರೂ ಮಾಡಿಕೊಳ್ಳಲಿ.ನಮ್ಮ ಪಕ್ಷದ ಸ್ಟ್ರಾಟೆಜೀನೆ ಬೇರೆ ಎಂದು ಹೇಳಿದರು.
ಗೆಲ್ಲದೆ ಇದ್ದರೆ ಸಿದ್ದರಾಮಯ್ಯ ರಾಜಕೀಯ ಸನ್ಯಾಸತ್ವ ತಗೋತೀನಿ ಅಂದಿದಾರಲ್ಲಾ ಎಂದು ಮಾಧ್ಯಮದವರು ಕೇಳಿದ್ದಕ್ಕೆ ಅದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದರು ಬೊಮ್ಮಾಯಿ.
ಚುನಾವಣಾ ವರ್ಷ ನಾವು ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ.ಎಲ್ಲಾ ಸಮುದಾಯಗಳಲ್ಲೂ ಬಡವರು ಇರುತ್ತಾರೆ ಅವರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತೇವೆ.ಕೇವಲ ಮುಸ್ಲಿಮರು ಅಂತ ಅಲ್ಲಾ ಎಲ್ಲರ ಕಲ್ಯಾಣವಾಗಬೇಕು ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಸೂತ್ರ ಅನುಸರಿಸುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.

